ಕುಡಿತದ ಅಭ್ಯಾಸ ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಮದ್ಯಪಾನದ ಅಪಾಯಗಳು ತಿಳಿದಿದ್ದರೂ ಅನೇಕರು ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪೋಷಕರಿಗೆ ಕುಡಿತದ ಅಭ್ಯಾಸವಿದ್ದರೆ ಅದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಟೆಕ್ಸಾಸ್ ಎ & ಎಂ ವಿಶ್ವವಿದ್ಯಾನಿಲಯದಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ. ಮಿತಿಮೀರಿ ಆಲ್ಕೋಹಾಲ್ ಸೇವಿಸುವ ದಂಪತಿಗಳ ಮಕ್ಕಳಲ್ಲಿ ವೇಗವಾಗಿ ವಯಸ್ಸಾಗುವ ಪ್ರಕ್ರಿಯೆ ಸಂಭವಿಸುತ್ತದೆ. ಇದಲ್ಲದೆ ಗಂಭೀರ ಕಾಯಿಲೆಗಳಿಗೆ ಅವರು ತುತ್ತಾಗುವ ಸಾಧ್ಯತೆಯೂ ಇರುತ್ತದೆ.
ಆಲ್ಕೋಹಾಲ್ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಪೋಷಕರು ಅತಿಯಾಗಿ ಆಲ್ಕೋಹಾಲ್ ಸೇವಿಸಿದರೆ, ಅದು ಅವರ ಮಕ್ಕಳ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ‘ಫೀಟಲ್ ಆಲ್ಕೋಹಾಲ್ ಸ್ಪೆಕ್ಟ್ರಮ್ ಡಿಸಾರ್ಡರ್’ (ಎಫ್ ಎಎಸ್ ಡಿ) ಎಂಬ ಸಮಸ್ಯೆ ಉದ್ಭವಿಸಬಹುದು. ಈ ಅಸ್ವಸ್ಥತೆಯು ಮಕ್ಕಳ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ತಡೆಯುತ್ತದೆ. ಅಂತಹ ಮಕ್ಕಳಲ್ಲಿ ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಮಾನಸಿಕ ಅಸ್ವಸ್ಥತೆಗಳಂತಹ ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಈ ರೋಗಗಳು 40-50 ವರ್ಷ ವಯಸ್ಸಿನಲ್ಲಿ ಸಂಭವಿಸುತ್ತವೆ. ಆದರೆ FASD ಯಿಂದ ಬಳಲುತ್ತಿರುವ ಮಕ್ಕಳಲ್ಲಿ ಈ ರೋಗಗಳು ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಇದಲ್ಲದೆ ಮಕ್ಕಳ ರೋಗನಿರೋಧಕ ಶಕ್ತಿ ದುರ್ಬಲವಾಗಬಹುದು. ಪರಿಣಾಮ ಅವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗಬಹುದು. ಮಾನಸಿಕ ಒತ್ತಡ ಮತ್ತು ಆತಂಕ ಅವರಲ್ಲಿ ಹೆಚ್ಚಾಗಿರುತ್ತದೆ. ಇದು ಅವರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪೋಷಕರ ಮದ್ಯಪಾನವು ಮಕ್ಕಳ ಆರೋಗ್ಯ ಮತ್ತು ಭವಿಷ್ಯ ಎರಡಕ್ಕೂ ಹಾನಿಕಾರಕವಾಗಿದೆ.
ಮಾನಸಿಕ ಆರೋಗ್ಯದ ಮೇಲೂ ಪರಿಣಾಮ!
ಮದ್ಯಪಾನ ಮಾಡುವ ಪೋಷಕರ ಮಕ್ಕಳು ಮಾನಸಿಕ ಅಸ್ವಸ್ಥತೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಮಕ್ಕಳು ಒತ್ತಡ, ಆತಂಕ ಮತ್ತು ಇತರ ಮಾನಸಿಕ ಸಮಸ್ಯೆಗಳನ್ನು ತ್ವರಿತವಾಗಿ ಬೆಳೆಸಿಕೊಳ್ಳಬಹುದು. ಇದು ಅವರ ದೈಹಿಕ ಬೆಳವಣಿಗೆಯ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ. ಅವರು ಚಿಕ್ಕ ವಯಸ್ಸಿನಲ್ಲೇ ವೃದ್ಧಾಪ್ಯದ ಕಾಯಿಲೆಗಳನ್ನು ಎದುರಿಸಬಹುದು.
ಪೋಷಕರು ಏನು ಮಾಡಬೇಕು?
ವಿಜ್ಞಾನಿಗಳ ಪ್ರಕಾರ ಈ ಅಪಾಯಗಳನ್ನು ತಪ್ಪಿಸಲು ಪೋಷಕರು ಕುಡಿತದ ಚಟ ಬಿಡಬೇಕು. ಏಕೆಂದರೆ ಇದು ಅವರ ಮಕ್ಕಳ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಬೇಕು. ಹೀಗೆ ಮಾಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿರುತ್ತದೆ.