alex Certify BIG NEWS : ರಾಜ್ಯದಲ್ಲಿ ಗೌರಿ- ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ಈ ನಿಯಮಗಳನ್ನು ಪಾಲಿಸೋದು ಕಡ್ಡಾಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ರಾಜ್ಯದಲ್ಲಿ ಗೌರಿ- ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ಈ ನಿಯಮಗಳನ್ನು ಪಾಲಿಸೋದು ಕಡ್ಡಾಯ..!

2024ನೇ ಸಾಲಿನ ಗೌರಿ-ಗಣೇಶ ಹಬ್ಬವನ್ನು ರಾಜ್ಯದಲ್ಲಿ ಗೌರಿ ಹಾಗೂ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಕೆರೆ/ ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಇದರಿಂದ ಜಲಮೂಲಗಳು ಕಲುಷಿತಗೊಂಡು ಪರಿಸರಕ್ಕೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಉಂಟಾಗುವುದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ 2016 ರ ಜುಲೈ, 20 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗೌರಿ ಹಾಗೂ ಗಣೇಶನ ವಿಗ್ರಹಗಳನ್ನು ರಾಜ್ಯದ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ.

ಆದ್ದರಿಂದ ಈ ವರ್ಷದ ಗೌರಿ-ಗಣೇಶ ಚತುರ್ಥಿ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಕೆಲವು ಕ್ರಮಗಳನ್ನು ಸಾರ್ವಜನಿಕರು ಅನುಸರಿಸಲು ತಿಳಿಸಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದೆಂದು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33(ಎ) ಅನ್ವಯ ರಾಜ್ಯದ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಐಪಿಸಿ ಸೆಕ್ಷನ್ 1860 ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು.

ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣ ರಹಿತ ಮಣ್ಣಿನ/ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ, ನಂತರ ಗೌರಿ ಗಣೇಶ ಮೂರ್ತಿಗಳನ್ನು ಅವರವರ ಮನೆಗಳಲ್ಲಿಯೇ ಅಥವಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವತಿಯಿಂದ ನಿಗಧಿಪಡಿಸಲಾಗುವ ಸ್ಥಳಗಳಲ್ಲಿ ಮಾತ್ರವೇ ವಿಸರ್ಜಿಸುವುದು.
ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಮತ್ತಿತರ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಿಂದ ವ್ಯವಸ್ಥೆ ಮಾಡಿರುವ ಕಸ ಸಂಗ್ರಹಣ ವಾಹನಕ್ಕೆ ನೀಡುವುದು.
ಶಬ್ದ ಮಾಲಿನ್ಯ (ನಿರ್ಬಂಧ ಮತ್ತು ನಿಯಂತ್ರಣ) ನಿಯಮಗಳು 2000 ರ ನಿಬಂಧನೆಗಳನ್ನು ಗಣೇಶ ಪೆಂಡಾಲ್ಗಳಲ್ಲಿ ಅನುಸರಿಸತಕ್ಕದ್ದು.

ಹಬ್ಬದ ಸಂದರ್ಭದಲ್ಲಿ ಪರಿಸರ ಸ್ನೇಹಿ ಹಸಿರು-ಪಟಾಕಿಗಳನ್ನು ಮಾತ್ರ ಉಪಯೋಗಿಸತಕ್ಕದ್ದು ಹಾಗೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಪೆಂಡಾಲ್ಗಳನ್ನು ನಿರ್ಮಿಸುವಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ತಿಳಿಸಿದೆ.
ರಾಜ್ಯದಲ್ಲಿ ನಿಷೇಧಿಸಲಾದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸದೇ ಇರುವುದು ಮತ್ತು ಬಳಸಿದ್ದಲ್ಲಿ ಸೂಕ್ತ ದಂಡವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ವಿಧಿಸಲಾಗುವುದು.
ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳು(ಕಾಂಪಸ್ಟೇಬಲ್, ಬಯೋಡಿಗ್ರೇಡೇಬಲ್ ಮತ್ತು ನಾನ್ ವೋವನ್ ಸ್ಯಾಕ್ಸ್ ಇರೆಸ್ಪೆಕ್ಟಿವ್ ಆಫ್ ಸೈಜ್ ಮತ್ತು ಥಿಕ್ನೆಸ್) ಬಳಸದೇ ಇರುವುದು ಮತ್ತು ಬಳಸಿದ್ದಲ್ಲಿ ಸೂಕ್ತ ದಂಡವನ್ನು ಮೂಲಕ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ರಾಸಾಯನಿಕಯುಕ್ತ ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡದೇ, ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸುವ ಮೂಲಕ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕೋರಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು, ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದರಿಂದ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ಭೌತಿಕ ಹಾಗೂ ರಾಸಾಯನಿಕ ಗುಣ ಮಾರ್ಪಟ್ಟು ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಪ್ರಾಣಿ, ಪಕ್ಷಿ ಹಾಗೂ ಜಲಚರಗಳ ಜೀವಕ್ಕೂ ಅಪಾಯವಾಗುವುದಲ್ಲದೇ ಸಾರ್ವಜನಿಕರÀ ಆರೋಗ್ಯಕ್ಕೂ ಧಕ್ಕೆ ಉಂಟಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹಬ್ಬದ ಆಚರಣೆಯಿಂದ ನೈಸರ್ಗಿಕ ಜಲ ಮೂಲಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಯಾವುದೇ ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಸಾರ್ವಜನಿಕರು ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸಬೇಕು.

*ಅನುಸರಿಸಬೇಕಾದ ಕ್ರಮ:*
ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ತಯಾರಿಸಬಾರದು ಹಾಗೂ ಕರ್ನಾಟಕರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ನಿವಾರಣೆ ಮತ್ತು ನಿಯಂತ್ರಣ) ಕಾಯ್ದೆ 1974ರ ಪ್ರಕಾರ ಕಲಂ 33 (ಎ) ಅನ್ವಯ ರಾಜ್ಯದ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ತೈಲ ಬಣ್ಣಗಳು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿದ್ದು, ಹಾಗಾಗಿ ಜೇಡಿ ಮಣ್ಣಿನಿಂದ ಮಾಡಿದ ಹಾಗೂ ನೈಸರ್ಗಿಕ ಬಣ್ಣಗಳಿಂದ ಮಾಡಿಸುವ ಗಣೇಶ ಮೂರ್ತಿಗಳನ್ನು ಪೂಜಿಸಬೇಕು. ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಬಣ್ಣರಹಿತ ಮಣ್ಣಿನ ಅಥವಾ ನೈಸರ್ಗಿಕ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿದ ನಂತರ ಮೂರ್ತಿಗಳನ್ನು ನಗರಸಭೆ, ಪುರಸಭೆ ವತಿಯಿಂದ ನಿಗದಿಪಡಿಸಿರುವ ಸ್ಥಳಗಳಲ್ಲಿ ಅಥÀವಾ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಚಾರಿ ವಾಹನದಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು.
ಗೌರಿಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿ ಕಸ (ಹೂ, ಹಣ್ಣು, ಬಾಳೆ ಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೇ, ನಗರಸಭೆ ಹಾಗೂ ಪುರಸಭೆಯ ಕಸ ಸಂಗ್ರಹಣ ವಾಹನಗಳಿಗೆ ನೀಡಬೇಕು. ಸಾರ್ವಜನಿಕವಾಗಿ ನಡೆಸುವ ಗಣೇಶ ಮೂರ್ತಿಯ ಉತ್ಸವ ಚಪ್ಪರಕ್ಕೆ ಪರಿಸರ ಸ್ನೇಹಿ ವಸ್ತುಗಳನ್ನೇ ಬಳಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮಾಡಬಾರದು.
ಶಬ್ದ ಮಾಲಿನ್ಯ (ನಿರ್ಬಂಧ ಮತ್ತು ನಿಯಂತ್ರಣ) ನಿಯಮಗಳು-2000 ರನ್ವಯ ಸಾರ್ವಜನಿಕ ಗಣೇಶ ಪೆಂಡಾಲ್ಗಳಲ್ಲಿ ಬಳಸುವ ಧ್ವನಿವರ್ಧಕ, ವಿದ್ಯುನ್ಮಾನ ಉಪಕರಣಗಳು ಮತ್ತು ಶಬ್ದ ಉಂಟುಮಾಡುವ ಉಪಕರಣಗಳನ್ನು ಬಳಸಲು ಪೋಲಿಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಹಾಗಾಗಿ ಸಾರ್ವಜನಿಕರು ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...