ಝೀಕಾ ಎಂಬುದು ವೈರಸ್ ಸೋಂಕು ಆಗಿದ್ದು, ಡೆಂಗ್ಯೂ , ಚಿಕಿನ್ ಗುನ್ಯಾ ರೋಗ ಹರಡುವ ಈಡೀಸ್ ಜಾತಿಯ ಸೊಳ್ಳೆಗಳಿಂದಲೂ ಹರಡುತ್ತದೆ. ಹಾಗಾಗಿ ಮನೆಯ ಸುತ್ತಲೂ ನೀರು ನಿಲ್ಲುವ ತ್ಯಾಜ್ಯ ಪರಿಕರಗಳಾದ ತೆಂಗಿನಚಿಪ್ಪು, ಪ್ಲಾಸ್ಟಿಕ್ ಕಫ್, ತಗಡಿನ ಡಬ್ಬ, ಟೈರ್ ಮುಂತಾದವುಗಳನ್ನು ವಿಲೇವಾರಿ ಮಾಡಬೇಕು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ವಿಶ್ವ ಸೊಳ್ಳೆ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಅವರು ಮಾತನಾಡಿದರು.
ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ, ಕಲ್ಲಿನದೋಣಿ ಮುಂತಾದವುಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳವನ್ನು ಮುಚ್ಚುವ ಮೂಲಕ ರೋಗ ತಡೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಬ್ರಿಟೀಷ್ ವೈದ್ಯರಾದ ಸರ್.ರೊನಾಲ್ಡ್ ರಾಸ್ ರವರು 1897 ಆಗಷ್ಟ್ 20 ರಂದು ಹೆಣ್ಣು ಅನಾಫಿಲಿಸ್ ಸೊಳ್ಳೆ ಮನುಷ್ಯರಿಗೆ ಮಲೇರಿಯಾ ಹರಡುತ್ತದೆ ಎಂಬುದನ್ನು ಕಂಡುಹಿಡಿದರು. ನಂತರ ಸೊಳ್ಳೆ ಕಚ್ಚುವಿಕೆಯಿಂದ ಹರಡುವ ಮಲೇರಿಯಾ, ಮೆದುಳು ಜ್ವರ, ಆನೆಕಾಲು ರೋಗ, ಡೆಂಗ್ಯೂ, ಚಿಕಿನ್ ಗುನ್ಯಾ ಮತ್ತು ಇತ್ತೀಚಿಗೆ ಕಂಡು ಬರುತ್ತಿರುವ ಝೀಕಾ ವೈರಸ್ ಕುರಿತಂತೆ ವ್ಯಾಪಕವಾಗಿ ಜಾಗೃತಿ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ ಝೀಕಾ ವೈರಸ್ ಈಡೀಸ್ ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಕಾಯಿಲೆಯಾಗಿದ್ದು, ಈಡೀಸ್ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಎಂದು ತಿಳಿಸಿದರು.ಜಿಲ್ಲೆಯ ನಾಗರಿಕರು ಝೀಕಾ ವೈರಸ್ ಪ್ರಕರಣ ವರದಿಯಾದ ಪ್ರದೇಶಕ್ಕೆ ಪ್ರವಾಸ ಹೋಗಿಬಂದಲ್ಲಿ ಅಥವಾ ಆ ಪ್ರದೇಶದಿಂದ ತಮ್ಮ ಮನೆಗಳಿಗೆ ಬಂಧು-ಬಳಗ ಬಂದಲ್ಲಿ ಅವರಲ್ಲಿ ಯಾರಿಗಾದರೂ ಝೀಕಾ ವೈರಸ್ ಲಕ್ಷಣಗಳಾದ ಜ್ವರ, ಕಣ್ಣು ಕೆಂಪಾಗುವಿಕೆ, ತಲೆನೋವು, ಗಂಧೆಗಳು, ಕೀಲುಗಳಲ್ಲಿ ನೋವು, ಸ್ನಾಯುಗಳಲ್ಲಿ ನೋವು ಕಂಡುಬAದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಹೇಳಿದರು.
ಅನುಸರಿಸಬೇಕಾದ ಕ್ರಮ:
ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2-7 ದಿನಗಳವರೆಗೆ ಇರುತ್ತದೆ. ಈ ಲಕ್ಷಣ ಹೊಂದಿದವರು ಹತ್ತಿರದ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು. ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ರೋಗ ಲಕ್ಷಣಗಳಿಗನುಗುಣವಾಗಿ ನಿರ್ವಹಣೆ ಮಾಡಲಾಗುವುದು.
ನಿರ್ಜಲೀಕರಣ ತಪ್ಪಿಸಲು ದ್ರವರೂಪದ ಆಹಾರವನ್ನು ಹೆಚ್ಚಿಗೆ ಸೇವಿಸಬೇಕು ಹಾಗೂ ಅಗತ್ಯ ವಿಶ್ರಾಂತಿ ಪಡೆಯಬೇಕು. ಶಂಕಿತ, ದೃಢ ಝೀಕಾ ವೈರಸ್ ಸೋಂಕಿತರು ಪ್ರತ್ಯೇಕವಾಗಿದ್ದು, ಮಲಗುವಾಗ ಅಥವಾ ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ ಬಳಸಬೇಕು. ಈಡೀಸ್ ಸೊಳ್ಳೆ ಕಡಿತದಿಂದ ಪಾರಾಗಲು ಸ್ವಯಂ ರಕ್ಷಣಾ ವಿಧಾನಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
ಮುಖ್ಯವಾಗಿ ಗರ್ಭಿಣಿಯರು ಅತ್ಯಂತ ಎಚ್ಚರವಹಿಸಬೇಕು. ಗರ್ಭಾವಸ್ಥೆಯಲ್ಲಿ ಝೀಕಾ ಸೋಂಕು ಕಾಣಿಸಿಕೊಂಡಲ್ಲಿ ಜನಿಸುವ ಶಿಶುವಿನ ತಲೆಯ ಗಾತ್ರದಲ್ಲಿ ಕಡಿಮೆ ಬೆಳವಣಿಗೆ ದೋಷ (ಮೈಕ್ರೋ ಸೆಫಾಲಿ) ಕಂಡು ಬರಬಹುದು. ಈ ಹಿನ್ನಲೆಯಲ್ಲಿ ಪ್ರತಿ ಶುಕ್ರವಾರ ಇಲಾಖೆಯಿಂದ ಕೈಗೊಳ್ಳುವ ಸೊಳ್ಳೆ ನಿರ್ಮೂಲನಾ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಲು ವಿನಂತಿಸಿದರು.