ಶಿವಮೊಗ್ಗ : ಅಗ್ನಿಪಥ್ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ದೈಹಿಕ ಕ್ಷಮತಾ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ಆಗಸ್ಟ್ 22ರಿಂದ 31ರವರೆಗೆ ನಗರದ ನೆಹರೂ ಸ್ಟೇಡಿಯಂನಲ್ಲಿ ನಡೆಸಲಾಗುವುದು ಎಂದು ಕರ್ನಲ್ ಕೃಷ್ಣನ್ ಕಶ್ಯಪ್ ಅವರು ಹೇಳಿದರು.
ಅವರು ಇಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿಯ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.
ಈ ರ್ಯಾಲಿಯಲ್ಲಿ ಮಂಗಳೂರು ಸೈನಿಕ ನೇಮಕಾತಿ ಘಟಕವು ಈಗಾಗಲೆ ನಡೆಸಿದ ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಹಾವೇರಿ ಮತ್ತು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಒಟ್ಟು 11 ಜಿಲ್ಲೆಗಳ ಅಭ್ಯರ್ಥಿಗಳ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಈಗಾಗಲೆ ರವಾನಿಸಲಾಗಿದ್ದು, ಪ್ರತಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ದಿನಾಂಕವನ್ನು ನಿಗಧಿಗೊಳಿಸಲಾಗಿದೆ ಎಂದರು.
ನೇಮಕಾತಿಗೆ ಪೂರಕವಾಗಿ ನಿಯಮಾನುಸಾರ ಅಭ್ಯರ್ಥಿಯು ಹೊಂದಿರುವ ದೈಹಿಕ ಸಾಮರ್ಥ್ಯವನ್ನು ಧೃಡೀಕರಿಸುವ ಕ್ರೀಡೆ, ಚಟುವಟಿಕೆ ನಡೆಸಲಾಗುವುದು ಎಂದ ಅವರು, ಪ್ರತಿದಿನ 800-900ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ ನೆರೆಯ ಹಾವೇರಿ ಜಿಲ್ಲೆಯಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಆಯ್ಕೆ ಬಯಸಿ ಬರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೀರು, ಶೌಚ ಹಾಗೂ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಮತ್ತು ಕ್ರೀಡಾ ಚಟುವಟಿಕೆಗಳೊಂದಿಗೆ ದಾಖಲಾತಿಗಳ ಪರಿಶೀಲನೆಯೂ ಇದೇ ಆವರಣದಲ್ಲಿ ನಡೆಯಲಿದೆ. ಅದಕ್ಕಾಗಿ ಸಂಬಧಿತ ಇಲಾಖೆಗಳ ಸ್ಥಳೀಯ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದ ಅವರು ಆಗಸ್ಟ್ 23ರಂದು ಬೆಳಿಗ್ಗೆ 6.30ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಈ ಎಲ್ಲಾ ನೇಮಕಾತಿ ಚಟುವಟಿಕೆಗಳು ಸುಗಮವಾಗಿ ನಡೆಯಲು ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರವಿದೆ. ಅದಕ್ಕಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಅದರ ಸಮಗ್ರ ಉಸ್ತುವಾರಿಗಾಗಿ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.