ರಾಜ್ಯದ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಪೋಷಕರು ಹಿಂದೇಟು ಹಾಕುತ್ತಾರೆ. ಅಲ್ಲಿ ಸೂಕ್ತ ಸೌಲಭ್ಯಗಳಿಲ್ಲದೆ ಇರುವುದು, ಶಿಕ್ಷಕರ ಕೊರತೆ ಮೊದಲಾದ ಕಾರಣಗಳಿಗಾಗಿ ದುಬಾರಿಯಾದರೂ ಸಹ ಡೊನೇಷನ್ ತೆತ್ತು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ.
ಇದೀಗ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಕೊಡುವ ಕಾರ್ಯ ನಿಧಾನವಾಗಿ ಆರಂಭವಾಗಿದ್ದು, ಒಟ್ಟು 12,500 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಒಟ್ಟು 56 ಸಾವಿರ ಶಿಕ್ಷಕರ ಕೊರತೆ ಇದ್ದು, ಶೀಘ್ರದಲ್ಲೇ 5,000 ಶಿಕ್ಷಕರ ನೇಮಕಾತಿ ಆಗಲಿದೆ ಎಂದು ಅವರು ತಿಳಿಸಿದ್ದಾರಲ್ಲದೆ, ಇದೀಗ ಕಲ್ಯಾಣ ಕರ್ನಾಟಕದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ, ಯುಕೆಜಿ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.