ಬೆಂಗಳೂರು : ಯಜಮಾನಿಯರಿಗೆ ಗುಡ್ ನ್ಯೂಸ್ ಎಂಬಂತೆ ಜೂನ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ. ಜುಲೈ ತಿಂಗಳ ಹಣ ಇನ್ನೆರಡು ದಿನದಲ್ಲಿ ಜಮಾ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಿದೆ. 2 ದಿನದಲ್ಲಿ ಜುಲೈ ತಿಂಗಳ ಹಣ ಜಮಾ ಆಗಲಿದೆ. ಆಗಸ್ಟ್ ತಿಂಗಳಿನ ಹಣ ಹಾಕುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಪ್ರತಿನಿತ್ಯ ಸಮಸ್ಯೆ ಹೇಳಿಕೊಂಡು ದಿನಕ್ಕೆ 500 ಕರೆ ಬರುತ್ತಿದೆ. ಎಲ್ಲಾ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗುತ್ತಿದೆ
ಗೃಹಲಕ್ಷ್ಮಿ ಯೋಜನೆಗೆ ಹಣ ಹಾಕಲು ತಿಂಗಳಿಗೆ 2400 ಕೋಟಿ ಹಣ ಖರ್ಚಾಗುತ್ತದೆ. ಈಗಾಗಲೇ ಬ್ಯಾಂಕ್ ಖಾತೆಗೆ ಹಣ ಕಳುಹಿಸಿದ್ದೇವೆ. ದೊಡ್ಡ ಮೊತ್ತ ಆಗಿದ್ದರಿಂದ ಹಣ ಹಾಕುವ ಕೆಲಸ ವಿಳಂಬವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಅಂಗನವಾಡಿ ಮಕ್ಕಳಿಗೆ ನೀಡುತ್ತಿದ್ದ ಮೊಟ್ಟೆಯಲ್ಲಿ ವಂಚನೆ ಮಾಡಿ, ತಟ್ಟೆಗೆ ಹಾಕಿದ್ದ ಮೊಟ್ಟೆಯನ್ನು ಎತ್ತಿಕೊಳ್ಳುತ್ತಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಬರೀ ಅಮಾನತು ಮಾಡಿದರೆ ಸಾಲದು ಬೇರೆ ರೀತಿ ಕ್ರಮ ಕೈಗೊಳ್ಳುತ್ತೇವೆ. ಇದು ಕ್ಷಮಿಸಲಾರದ ಅಪರಾಧ. ಜೊತೆಗೆ ಡಿಡಿಪಿಐ ಅಮಾನತಿಗೆ ಕೂಡ ಚಿಂತನೆ ನಡೆಸಲಾಗಿದೆ ಎಂದರು.