ಬೆಂಗಳೂರು : ಉದ್ಯೋಗಿಗಳ ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಕರ್ನಾಟಕದ ಐಟಿ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿರುವ ವಿಚಾರಕ್ಕೆ ಉದ್ಯೋಗಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಹಿನ್ನೆಲೆ 500 ಕ್ಕೂ ಹೆಚ್ಚು ಉದ್ಯೋಗಿಗಳು ಇಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಾವು ಜೀತದಾಳುಗಳಲ್ಲ , ಕೆಲಸದ ಸಮಯವನ್ನು 14 ಗಂಟೆಗಳವರೆಗೆ ವಿಸ್ತರಿಸಬೇಕೆಂಬ ಕ್ರಮ ಖಂಡನೀಯ ಎಂದು ರಾಜ್ಯ ಸರ್ಕಾರದ ವಿರುದ್ಧ ಐಟಿ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದಾರೆ.
ಕರ್ನಾಟಕ ಸರ್ಕಾರವು ಐಟಿ ಉದ್ಯೋಗಿಗಳ ಕೆಲಸದ ಸಮಯವನ್ನು ಹೆಚ್ಚಿಸಲು ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯಿದೆ, 1961 ಅನ್ನು ತಿದ್ದುಪಡಿ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ, ಇದು ಕಾರ್ಮಿಕ ಸಂಘಟನೆಗಳಿಂದ ಪ್ರತಿರೋಧವನ್ನು ಎದುರಿಸಿದೆ. ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘದ (ಕೆಐಟಿಯು) ಪ್ರತಿನಿಧಿಗಳು ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಐಟಿ-ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕರೂಪ ಕೌರ್ ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆಗೆ ತಮ್ಮ ವಿರೋಧವನ್ನು ದಾಖಲಿಸಿದ್ದರು.