ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಈ ಘೋರ ದುರಂತದಲ್ಲಿ ಮನೆಗಳು ಕೊಚ್ಚಿ ಹೋಗಿದ್ದು, ಹಲವರು ಕಾಣೆಯಾಗಿದ್ದಾರೆ. ನಾಪತ್ತೆಯಾಗಿರುವವರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆದಿದ್ದು, ಆದರೆ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಇದಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ.
ಈ ಭೂಕುಸಿತದಲ್ಲಿ ತಮ್ಮವರನ್ನು ಕಳೆದುಕೊಂಡವರಿಗೆ ಪರಿಹಾರ ಶಿಬಿರ ಸ್ಥಾಪಿಸಲಾಗಿದ್ದು, ಇವರುಗಳಿಗೆ ನೆರವಾಗಲು ಸಹಾಯ ಹಸ್ತ ಚಾಚಲಾಗುತ್ತಿದೆ. ಉಳಿದವರ ಪೈಕಿ ಕೆಲ ನವಜಾತ ಶಿಶುಗಳಿದ್ದು, ತಾಯಿಯನ್ನು ಕಳೆದುಕೊಂಡ ಅವರುಗಳ ರಕ್ಷಣೆಯೇ ಜಿಲ್ಲಾಡಳಿತಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಇದೀಗ ತಾಯಿ ಹೃದಯದ ಮಹಿಳೆಯೊಬ್ಬರು ಈ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ.
ಹೌದು, ಇಡುಕ್ಕಿ ಜಿಲ್ಲೆಯ ಕಟಪ್ಪನ್ನಾ ನಿವಾಸಿ ಭಾವನಾ ಎಂಬವರು ವಯನಾಡು ಭೂಕುಸಿತದಲ್ಲಿ ತಾಯಿಯನ್ನು ಕಳೆದುಕೊಂಡಿರುವ ನವಜಾತ ಶಿಶುಗಳಿಗೆ ಎದೆ ಹಾಲುಣಿಸಲು ಮುಂದಾಗಿದ್ದಾರೆ. ನಾಲ್ಕು ವರ್ಷದ ಹಾಗೂ ನಾಲ್ಕು ತಿಂಗಳ ಮಗುವನ್ನು ಹೊಂದಿರುವ ಭಾವನಾ ಅವರ ಈ ನಿರ್ಧಾರಕ್ಕೆ ಚಾಲಕ ವೃತ್ತಿಯಲ್ಲಿರುವ ಅವರ ಪತಿ ಸಜಿನ್ ಪರೇಕರ ಕೂಡಾ ಬೆಂಬಲವಾಗಿ ನಿಂತಿದ್ದು, ಪತ್ನಿಯನ್ನು ಕರೆದುಕೊಂಡು ದುರಂತದ ಸ್ಥಳಕ್ಕೆ ತೆರಳಿದ್ದಾರೆ.
ವಯನಾಡು ಜಿಲ್ಲೆಯ ಭೂಕುಸಿತದ ದುರಂತದ ವಿಷಯ ತಿಳಿಯುತ್ತಿದ್ದಂತೆ ಮಮ್ಮಲುಮರುಗಿದ್ದ ಭಾವನಾ, ಸಂತ್ರಸ್ತರಿಗೆ ಯಾವುದಾದರೂ ಒಂದು ರೀತಿಯಲ್ಲಿ ನೆರವಾಗಲು ಬಯಸಿದ್ದರು. ಆಗ ಅವರಿಗೆ ನವಜಾತ ಶಿಶುಗಳಿಗೆ ಎದೆ ಹಾಲುಣಿಸುವ ವಿಚಾರ ಬಂದಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ ತಕ್ಷಣವೇ ಇವರನ್ನ ಸಂಪರ್ಕಿಸಿದ್ದು, ದುರಂತ ಸ್ಥಳಕ್ಕೆ ಬರುವಂತೆ ಮನವಿ ಮಾಡಿತ್ತು. ಇದೀಗ ಭಾವನಾ ಪತಿಯೊಂದಿಗೆ ಅಲ್ಲಿಗೆ ತೆರಳಿದ್ದು, ಮಾನವೀಯ ಕಾರ್ಯ ಮಾಡಲು ಸಜ್ಜಾಗಿದ್ದಾರೆ.