ಭೀಕರ ಅಪಘಾತಕ್ಕಕೊಳಗಾಗಿ ಅಮೆರಿಕ ಆಸ್ಪತ್ರೆಯಲ್ಲಿ ಕಳೆದ 102 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಭಾರತೀಯ ಯುವಕ ಕೊನೆಗೂ ಪ್ರಾಣ ಬಿಟ್ಟಿದ್ದಾನೆ. ಅಮೆರಿಕಾದಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ತೆಲಂಗಾಣದ ಮೆಹಬೂಬ ಬಾದ್ ನ 26 ವರ್ಷದ ರೇವಂತ್ ರೆಡ್ಡಿ ಮೃತಪಟ್ಟವರಾಗಿದ್ದಾರೆ.
ಕಳೆದ ಏಪ್ರಿಲ್ 13ರಂದು ರೇವಂತ್ ರೆಡ್ಡಿಗೆ ಅಪಘಾತವಾಗಿದ್ದು, ಅವರನ್ನು ಆಸ್ಟಿನ್ ನಗರದ ಡೆಲ್ ಸ್ಟೇಷನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡಲ್ಲಾಸ್ ನ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇಷ್ಟಾದರೂ ಚಿಕಿತ್ಸೆ ಫಲಕಾರಿಯಾಗದೆ ಜುಲೈ 24ರಂದು ಸಾವಿಗೀಡಾಗಿದ್ದಾರೆ.
ರೇವಂತ್ ರೆಡ್ಡಿ ಅವರ ಚಿಕಿತ್ಸಾ ವೆಚ್ಚ ಅತ್ಯಂತ ದುಬಾರಿಯಾದ ಕಾರಣ ಫಂಡ್ ರೈಸಿಂಗ್ ಕೂಡ ಮಾಡಲಾಗಿದ್ದು, ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ದೇಣಿಗೆ ನೀಡಿ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಇಷ್ಟೆಲ್ಲಾ ಹಾರೈಕೆಗಳ ನಡುವೆಯೂ ರೇವಂತ್ ರೆಡ್ಡಿ ಇಹಲೋಕ ತ್ಯಜಿಸಿದ್ದು ಅವರ ಮೃತ ದೇಹವನ್ನು ಈಗ ಭಾರತಕ್ಕೆ ತರಲಾಗಿದೆ.