ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕಿಡಿ ಕಾರಿರುವ ಶಾಸಕ ರಮೇಶ್ ಜಾರಕಿಹೊಳಿ, ಈವರೆಗೆ ನಾನು ಅವರನ್ನು ಮಹಾನ್ ನಾಯಕ ಎಂದು ಟೀಕಿಸುತಿದ್ದೆ. ಆದರೆ ಈ ಪದ ಅಪಾರ್ಥವಾಗಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದಂತಾಗುತ್ತಿತ್ತು. ಹೀಗಾಗಿ ಅವರಿಗೆ ಈಗ ಸಿಡಿ ಶಿವು ಎಂದು ಹೊಸದಾಗಿ ನಾಮಕರಣ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಭಾನುವಾರದಂದು ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ನಾನು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದೆ. ಈ ಸಂದರ್ಭದಲ್ಲಿ ನಾವುಗಳು ಡಿ.ಕೆ. ಶಿವಕುಮಾರ್ ಅವರಿಗೆ ಸಿಡಿ ಶಿವು ಎಂದು ಮರುನಾಮಕರಣ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಪಾದಯಾತ್ರೆಗೆ ಮುಂದಾಗಿರುವ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಆದರೆ ಅದಕ್ಕೂ ಮೊದಲು ವಾಲ್ಮೀಕಿ ನಿಗಮದ ಹಗರಣ ಹಾಗೂ ಪರಿಶಿಷ್ಟರ ಅನುದಾನ ದುರ್ಬಳಕೆ ಮಾಡಿಕೊಂಡಿದ್ದರ ವಿರುದ್ಧ ಪಾದಯಾತ್ರೆ ಮಾಡಲಿ ಎಂದು ಹೇಳಿದರು. ಅಲ್ಲದೆ ತಾವು ಹಾಗೂ ಶಾಸಕ ಬಸನಗೌಡ ಪಾಟೀಲ ಈ ವಿಷಯಕ್ಕೆ ಸಂಬಂಧಿಸಿದಂತೆ ಕೂಡಲಸಂಗಮದಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಲಿದ್ದೇವೆ ಎಂದು ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದರು.