ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಮತ್ತೊಮ್ಮೆ ಗೇಲಿಗೆ ಒಳಗಾಗಿದ್ದಾರೆ. ಪ್ರಸ್ತುತ ಲೋಕಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿಯವರು ನೀಟ್ ಆಕಾಂಕ್ಷಿಗಳೊಂದಿಗೆ ಮುಖಾಮುಖಿಯಾದ ವೇಳೆ ಮಾರ್ಕ್ಸ್ ವಿವರ ಕೇಳಲು ಹೋಗಿ ವೋಟ್ ಎಂದು ಹೇಳುವ ಮೂಲಕ ಪೇಚಿಗೆ ಸಿಲುಕಿದ್ದಾರೆ.
ನೀಟ್ ಪರೀಕ್ಷಾ ಅಕ್ರಮ ಬಯಲಿಗೆ ಬಂದ ಬಳಿಕ ಬಹಳಷ್ಟು ವಿದ್ಯಾರ್ಥಿಗಳು, ಕಷ್ಟಪಟ್ಟು ಓದಿದ ತಮಗೆ ಅನ್ಯಾಯವಾಗಿದೆ ಎಂದು ಭಾವನೆ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ರಾಹುಲ್ ಗಾಂಧಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ, ನೀಟ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಎಷ್ಟು ಬಾರಿ ನೀಟ್ ಪರೀಕ್ಷೆಯನ್ನು ಬರೆದಿದ್ದೀಯಾ ಎಂದು ಆತನನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಆತ ಇದು ನನ್ನ ಪ್ರಥಮ ಪ್ರಯತ್ನ ಎಂದು ಹೇಳಿದ್ದು, ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ ಎಷ್ಟು ವೋಟ್, ನೀವು ಎಷ್ಟು ಪಡೆದುಕೊಂಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಆ ವಿದ್ಯಾರ್ಥಿ 600 ಎಂದು ಉತ್ತರಿಸಿದ್ದು, ಆದರೆ ರಾಹುಲ್ ಗಾಂಧಿ ಮಾರ್ಕ್ಸ್ ಬದಲು ವೋಟ್ ಎಂದು ಕೇಳಿರುವುದು ಈಗ ಗೇಲಿಗೆ ಕಾರಣವಾಗಿದೆ. ರಾಜಕಾರಣಿಗಳಿಗೆ ಜನಸಾಮಾನ್ಯರ ಸಂಕಷ್ಟದ ಬದಲು ಸದಾ ವೋಟಿನ ಚಿಂತೆಯೇ ಕಾಡುತ್ತದೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ.