ಬೆಂಗಳೂರು : ಅಂಬೇಡ್ಕರ್ ಸಂವಿಧಾನ ಕೊಡದೇ ಹೋಗಿದ್ರೆ ನಾನು ಸಿಎಂ, ಮೋದಿ ಪ್ರಧಾನಿ ಆಗ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಂಜನಗೂಡಿನಲ್ಲಿ ದಲಿತ ಮತ್ತು ಸಾಮಾಜಿಕ ಹೋರಾಟಗಾರರು ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತೋತ್ಸವ ಮತ್ತು “ನಮ್ಮ ನಡಿಗೆ ಸಂವಿಧಾನದ ಕಡೆಗೆ” ಅಭಿಯಾನವನ್ನು ಉದ್ಘಾಟಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಮಾತನಾಡಿದರು.
ಬ್ರಿಟೀಷರಿಂದ ಬಿಡುಗಡೆಗೊಂಡು ರಾಜಕೀಯವಾಗಿ ಸ್ವತಂತ್ರಗೊಂಡಿದ್ದ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಕೊಡಿಸಲು ಅಂಬೇಡ್ಕರ್ ಅವರು ಹೋರಾಟ ಮುಂದುವರೆಸಿದರು. ಮನುಷ್ಯ ತಾರತಮ್ಯವನ್ನು ಆಚರಿಸುವ ಚಾತುರ್ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿದ್ದಲ್ಲ. ತಮ್ಮ ಸ್ವಾರ್ಥಕ್ಕಾಗಿ ಕೆಲವು ಮನುಷ್ಯರೇ ಸೃಷ್ಟಿಸಿದ್ದು. ಈ ತಾರತಮ್ಯವನ್ನು ಅಳಿಸುವುದೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಉದ್ದೇಶವಾಗಿತ್ತು. ಈ ಉದ್ದೇಶಕ್ಕಾಗಿ ಹೋರಾಟ ಮುಂದುವರೆಸುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ.
ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಂಬೇಡ್ಕರ್ ಅವರು ಇಂತಹ ಶ್ರೇಷ್ಠ ಸಂವಿಧಾನ ಕೊಡದೇ ಹೋಗಿದ್ದರೆ ನಾನು ಮುಖ್ಯಮಂತ್ರಿ ಆಗಲು ಸಾಧ್ಯವೇ ಆಗುತ್ತಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಅಂಬೇಡ್ಕರ್ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಸ್ವಾಭಿಮಾನದಿಂದ ನಡೆದುಕೊಳ್ಳಬೇಕು. ಸಾವಿರಾರು ವರ್ಷಗಳಿಂದ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ಶೂದ್ರ, ದಲಿತರು ಮತ್ತು ಮಹಿಳೆಯರಿಗೆ ಅಂಬೇಡ್ಕರ್ ಅವರ ಸಂವಿಧಾನ ಶಿಕ್ಷಣದ ಹಕ್ಕನ್ನು ಒದಗಿಸಿಕೊಟ್ಟಿತು. ಅದಕ್ಕೂ ಮೊದಲು ಮೇಲು ಜಾತಿಯ ಮಹಿಳೆಯರಿಗೂ ಶಿಕ್ಷಣ ಕಲಿಯುವ ಅವಕಾಶ ಇರಲಿಲ್ಲ. ಈ ಇತಿಹಾಸವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಯಾರಿಗೆ ಇತಿಹಾಸ ಗೊತ್ತಿರುವುದಿಲ್ಲವೋ ಅವರು ಭವಿಷ್ಯವನ್ನೂ ರೂಪಿಸಲಾರರು ಎನ್ನುವ ಅಂಬೇಡ್ಕರ್ ಅವರ ಮಾತು ನೂರಕ್ಕೆ ನೂರರಷ್ಟು ನಿಜ ಎಂದರು.