ಬೆಂಗಳೂರು : ‘ವಾಲ್ಮೀಕಿ’ ಮತ್ತು ‘ಮುಡಾ’ ಹಗರಣ ವಿವಾದದ ಬಗೆಗಿನ ವಿಪಕ್ಷಗಳ ಟೀಕೆಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿರಬಹುದಾದ ಅವ್ಯವಹಾರ ಹಾಗೂ ಇತ್ತೀಚಿನ ವಾಲ್ಮೀಕಿ ನಿಗಮದ ಹಣ ದುರ್ಬಳಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆಗಿದೆಯೋ, ಇಲ್ಲವೋ? ಎಂದು ಪತ್ತೆ ಹಚ್ಚಲು ತನಿಖೆ ಮಾಡಲಾಗುತ್ತಿದ್ದು, ಸದ್ಯ ಎಲ್ಲಾ ನಿವೇಶನಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಹಾಗಾಗಿ ಸರ್ಕಾರಕ್ಕೆ ನಷ್ಟವಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂದು ಆರೋಪಿಸಿ, ಸಿಬಿಐ ಗೆ ಹಸ್ತಾಂತರಿಸಲು ಬಿಜೆಪಿ ಪಕ್ಷ ಒತ್ತಾಯಿಸುತ್ತಿದೆ. ಹಿಂದೆ ಅವರೇ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದರು? ಒಂದನ್ನೂ ಕೊಟ್ಟಿಲ್ಲ. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ. ಈಗ ಅವರೇ ಅದನ್ನು ಹಗರಣ ಎನ್ನುತ್ತಿದ್ದಾರೆ. ಈ ಪ್ರಕರಣದಲ್ಲಿ ನನ್ನ ಪಾತ್ರವೇನಿದೆ? ಆರ್. ಅಶೋಕ್ ಕರ್ತವ್ಯ ಲೋಪವೆಸಗಿದ್ದಾರೆ ಎಂದರೆ ರಾಜೀನಾಮೆ ಕೊಡುತ್ತಾರೆಯೇ? ಅವರ ಕಾಲದಲ್ಲಿ ಅಕ್ರಮ – ಸಕ್ರಮ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ಆರೋಪ ಕೇಳಿ ಬಂದಾಗ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಅದಕ್ಕೆ ರಾಜೀನಾಮೆ ಕೊಡಿ ಅಂದರೆ ಕೊಡುತ್ತಾರೆಯೇ?
ವಾಲ್ಮೀಕಿ ನಿಗಮದ ಪ್ರಕರಣವನ್ನು ಎಸ್ಐಟಿ ಗೆ ವಹಿಸಲಾಗಿದ್ದು ತನಿಖೆ ನಡೆಯುತ್ತಿದೆ. ಸಚಿವರಾಗಿದ್ದ ನಾಗೇಂದ್ರ ಅವರಿಂದ ರಾಜೀನಾಮೆ ಪಡೆಯಲಾಗಿದೆ. ಡೆತ್ ನೋಟ್ನಲ್ಲಿ ಮಂತ್ರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಮೌಖಿಕ ಆದೇಶ ನೀಡಿದ್ದರು ಎಂದು ಬರೆದಿರುವ ಕಾರಣ ರಾಜೀನಾಮೆ ಪಡೆದೆವು. ಬ್ಯಾಂಕ್ ವ್ಯವಹಾರಗಳ ಬಗ್ಗೆ ಸಿಬಿಐ ತನಿಖೆ ಕೈಗೊಂಡಿದೆ. ಈ ಹಗರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಪತ್ತೆ ಹಚ್ಚುವ ಕಾರಣಕ್ಕಾಗಿಯೇ ಎಸ್ಐಟಿ ರಚನೆಯಾಗಿದೆ. ತನಿಖೆಯ ವರದಿ ಬರಬೇಕು. ಅವರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಬೇಕು. ಇದ್ಯಾವುದೂ ಇಲ್ಲದೇ ಕ್ರಮ ಕೈಗೊಳ್ಳುವುದು ಹೇಗೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.