ಯಾವುದೇ ಒಂದು ಸಂಸ್ಥೆಯ ಯಶಸ್ಸಿನ ಹಿಂದೆ ಅಲ್ಲಿನ ಉದ್ಯೋಗಿಗಳ ಪ್ರಾಮಾಣಿಕ ಕೆಲಸ ಮತ್ತು ನಿಷ್ಠೆ ಇರುತ್ತದೆ. ಆದರೆ, ಕಂಪನಿಗಳು ಈ ನಿಷ್ಠೆಯನ್ನು ಗುರುತಿಸದೆ ಹೋದಾಗ ಏನಾಗುತ್ತದೆ ಎಂಬುವುದಕ್ಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಘಟನೆಯೇ ಸಾಕ್ಷಿ. ಆರು ವರ್ಷಗಳ ಕಾಲ ಹಗಲಿರುಳು ದುಡಿದ ಉದ್ಯೋಗಿಯೊಬ್ಬರು, ತಮಗಿಂತ ಕಡಿಮೆ ಅನುಭವವಿರುವ ಯುವಕನಿಗೆ ಹೆಚ್ಚಿನ ಆದ್ಯತೆ ಸಿಕ್ಕಿದ್ದನ್ನು ಕಂಡು ಬೇಸತ್ತು ರಾಜೀನಾಮೆ ನೀಡಿದ ಕಥೆ ಈಗ ಭಾರಿ ಚರ್ಚೆ ಹುಟ್ಟುಹಾಕಿದೆ.
ಕಂಪನಿಯ ಬೆನ್ನೆಲುಬಾಗಿದ್ದ ‘ಮೌನ’ ಕೆಲಸಗಾರ ವರದಿಗಳ ಪ್ರಕಾರ, ಈ ಉದ್ಯೋಗಿ ಕಂಪನಿಯ ಪ್ರತಿಯೊಂದು ಸಿಸ್ಟಮ್ ಅನ್ನು ಅತೀ ಹೆಚ್ಚು ಅರಿತವರಾಗಿದ್ದರು. ಎಲ್ಲರಿಗಿಂತ ಮುಂಚಿತವಾಗಿ ಕಚೇರಿಗೆ ಬರುವುದು ಮತ್ತು ಎಲ್ಲರೂ ಹೋದ ಮೇಲೆ ಕೆಲಸ ಮುಗಿಸಿ ಮನೆಗೆ ಹೋಗುವುದು ಇವರ ಹವ್ಯಾಸವಾಗಿತ್ತು. ಮಧ್ಯರಾತ್ರಿ 2 ಗಂಟೆಗೆ ಕಂಪನಿಯಲ್ಲಿ ಏನಾದರೂ ಸಮಸ್ಯೆಯಾದರೂ ಇವರನ್ನೇ ಕರೆಯಲಾಗುತ್ತಿತ್ತು. ನಿರ್ದೇಶಕರು ಮಂಡಿಸುವ ವರದಿಗಳ ಹಿಂದೆ ಇವರ ಪರಿಶ್ರಮವಿರುತ್ತಿತ್ತು. ಆದರೆ, ಇಷ್ಟೆಲ್ಲಾ ಕೆಲಸ ಮಾಡಿದರೂ ಇವರಿಗೆ ಕಳೆದ ಆರು ವರ್ಷಗಳಿಂದ ಯಾವುದೇ ಬಡ್ತಿ ಸಿಕ್ಕಿರಲಿಲ್ಲ.
ಎಂಬಿಎ ಪದವೀಧರನ ಎಂಟ್ರಿ ಮತ್ತು ಬದಲಾದ ಪರಿಸ್ಥಿತಿ ಸಂಸ್ಥೆಗೆ ಇತ್ತೀಚೆಗೆ 26 ವರ್ಷದ ಎಂಬಿಎ ಪದವೀಧರನೊಬ್ಬ ಸೇರ್ಪಡೆಯಾಗಿದ್ದ. ಆತ ಬಂದ ಕೆಲವೇ ತಿಂಗಳುಗಳಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ (MD) ಜೊತೆ ನಿಕಟ ಸಂಪರ್ಕ ಸಾಧಿಸಿದ. ಆರು ವರ್ಷದಿಂದ ದುಡಿಯುತ್ತಿದ್ದ ಉದ್ಯೋಗಿಗೆ ಸಿಗದ ಅವಕಾಶಗಳು ಮತ್ತು ಸಭೆಗಳಲ್ಲಿ ಭಾಗವಹಿಸುವ ಆಹ್ವಾನ ಈ ಹೊಸ ಯುವಕನಿಗೆ ಸಿಗತೊಡಗಿತು. ವಿಪರ್ಯಾಸವೆಂದರೆ, ಈ ಹೊಸಬನಿಗೆ ಕೆಲಸ ಕಲಿಸುವ ಜವಾಬ್ದಾರಿಯನ್ನು ಕೂಡ ಅದೇ ಹಿರಿಯ ಉದ್ಯೋಗಿಗೇ ನೀಡಲಾಗಿತ್ತು.
“ಕಂಪನಿಗೆ ನಿಷ್ಠನಾಗಿದ್ದೆ, ಉದ್ದೇಶಕ್ಕಲ್ಲ” ತನ್ನ ಜ್ಞಾನವನ್ನೆಲ್ಲಾ ಹೊಸಬನಿಗೆ ಧಾರೆಯೆರೆದ ನಂತರ, ಆ ಉದ್ಯೋಗಿ ಒಂದು ದೊಡ್ಡ ನಿರ್ಧಾರ ಮಾಡಿದರು. “ನಾನು ಇಷ್ಟು ದಿನ ಒಂದು ಕಂಪನಿಗೆ ನಿಷ್ಠನಾಗಿದ್ದೆ, ಆದರೆ ನನ್ನ ವೃತ್ತಿಜೀವನದ ಉದ್ದೇಶಕ್ಕಲ್ಲ” ಎಂದು ಅರಿತುಕೊಂಡ ಅವರು ಎರಡು ವಾರಗಳಲ್ಲೇ ರಾಜೀನಾಮೆ ನೀಡಿದರು. ತಮ್ಮ ಅಪಾರ ಅನುಭವವನ್ನು ಬಳಸಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿದರು. ಅವರು ಕೆಲಸ ಬಿಟ್ಟ ನಂತರವೇ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಅವರ ಮೌಲ್ಯ ಏನೆಂಬುದು ಅರಿವಾಯಿತು. ಅವರ ನಿರ್ಗಮನವು ಕಂಪನಿಗೆ ದೊಡ್ಡ ನಷ್ಟ ಎಂದು ಇಡೀ ತಂಡಕ್ಕೆ ಇಮೇಲ್ ಕಳುಹಿಸಲಾಯಿತು. ಆದರೆ, ಆ ಇಮೇಲ್ ಬರಲು ಆರು ವರ್ಷಗಳು ಮತ್ತು ಒಂದು ರಾಜೀನಾಮೆ ಬೇಕಾಯಿತು!
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಈ ಘಟನೆ ಹೊರಬೀಳುತ್ತಿದ್ದಂತೆ ನೆಟ್ಟಿಗರು ಕಂಪನಿಯ ಧೋರಣೆಯನ್ನು ಖಂಡಿಸಿದ್ದಾರೆ. “ಗುರುತಿಸುವಿಕೆ ಎಂಬುದು ಉದ್ಯೋಗಿ ಕೆಲಸ ಬಿಡುವ ಮೊದಲು ಸಿಗಬೇಕೇ ಹೊರತು ಹೋದ ನಂತರವಲ್ಲ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. “ಕಂಪನಿಗಳಲ್ಲಿ ಯಾರಿಗೆ ಹೆಚ್ಚು ಸದ್ದು ಮಾಡಲು ತಿಳಿದಿದೆಯೋ ಅವರಿಗೆ ಮಾತ್ರ ಮೌಲ್ಯ ಸಿಗುತ್ತದೆ, ಮೌನವಾಗಿ ಕೆಲಸ ಮಾಡುವವರು ಕೇವಲ ಮೂಲಸೌಕರ್ಯದಂತೆ ಕಾಣುತ್ತಾರೆ” ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಕಥೆಯು ಪ್ರತಿಭಾವಂತ ಉದ್ಯೋಗಿಗಳು ತಮ್ಮ ಮೌಲ್ಯವನ್ನು ಗುರುತಿಸದ ಕಡೆ ಕಾಲಹರಣ ಮಾಡಬಾರದು ಎಂಬ ಸಂದೇಶವನ್ನು ನೀಡುತ್ತದೆ.

