HomeKarnatakaBIG NEWS: ಇಂದು ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯಾದ್ಯಂತ 2500 ಕಿ.ಮೀ. ವಿಶ್ವ ದಾಖಲೆಯ ಮಾನವ...

BIG NEWS: ಇಂದು ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯಾದ್ಯಂತ 2500 ಕಿ.ಮೀ. ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ

ಬೆಂಗಳೂರು: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ 2500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ರಾಜ್ಯಾದ್ಯಂತ ನಿರ್ಮಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಸರ್ಕಾರ ಮುಂದಾಗಿದೆ.

ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು 25 ಲಕ್ಷ ಮಂದಿ ಕೈಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ನಿರ್ಮಿಸಲಿದ್ದಾರೆ.

ಇದೇವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ, ಸುತ್ತಮುತ್ತ ಪ್ರದೇಶದಲ್ಲಿ ಗಿಡಗಳನ್ನೂ ನೆಡಲಿದ್ದಾರೆ. ಈ ಮೂಲಕ ಅಂದು ರಾಜ್ಯಾದ್ಯಂತ 10ಲಕ್ಷ ಗಿಡಗಳನ್ನು ನೆಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ರಾಜ್ಯ 32 ಇಲಾಖೆಗಳ ಸುಮಾರು 8 ಲಕ್ಷಕ್ಕೂ ಅಧಿಕ ಸಿಬ್ಬಂದಿ ಇಡೀ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿದ್ದು, ಇಲಾಖೆ ಸಚಿವರಾದ ಡಾ. ಹೆಚ್. ಸಿ. ಮಹಾದೇವಪ್ಪ ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆಗಳನ್ನು ನಡೆಸಿದ್ದಾರೆ. ಈ ವಿನೂತನ ಮತ್ತು ಬೃಹತ್ ಕಾರ್ಯಕ್ರಮಕ್ಕೆ ಲಂಡನ್ ನ ವಿಶ್ವ ದಾಖಲೆ ಪರಿಶೀಲಿಸುವ ತಂಡ ಆಗಮಿಸಲಿದ್ದು, ಎಲ್ಲವೂ ದಾಖಲೆಗಳ ನಿಯಮದಂತಿರುವುದನ್ನು ವಿವಿಧ ಹಂತಗಳಲ್ಲಿ ಅಧ್ಯಯನ ಮಾಡಲಿದೆ. ನಂತರ ಕಾರ್ಯಕ್ರಮ ದಾಖಲೆಗಳ ನಿಯಮಕ್ಕೆ ಒಪ್ಪುವಂತೆ ಇದ್ದರೆ ಕಾರ್ಯಕ್ರಮವನ್ನು ವಿಶ್ವ ದಾಖಲೆಗೆ ಸೇರಿಸಲಿದೆ. ಇದೆಲ್ಲದಕ್ಕೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಅವರು ತಮ್ಮದೇ ರೀತಿಯಲ್ಲಿ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಡ್ರೋನ್ ಚಿತ್ರೀಕರಣ ಹಾಗೂ ಪ್ರತಿ ಜಿಲ್ಲೆಯ ತಾಲೂಕುಗಳ ಮಾಹಿತಿಗಳು ಕ್ಷಣಕ್ಷಣದಲ್ಲಿ ಲಭ್ಯವಾಗಿ ಆಯೋಜಕರ ನಡುವೆ ಸಂಪೂರ್ಣ ಸಮನ್ವಯದೊಂದಿಗೆ ನಡೆಯುವಂತೆ ಮಾಡುವ ವಿಶೇಷ ಸುಧಾರಿತ ತಂತ್ರಜ್ಞಾನದ ಜಾಲವೊಂದರ ಸಿದ್ಧತೆ ನಡೆಸಿದ್ದಾರೆ.

ಈ ವಿಶೇಷ ಮಾನವ ಸರಪಳಿ ಪ್ರತಿ ಜಿಲ್ಲೆ, ತಾಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು ಹೋಗುವ  ಹೆದ್ದಾರಿಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ಹಳ್ಳಿಗಳಲ್ಲೂ ಇದೊಂದು ಹಬ್ಬದಂತೆ ಆಚರಿಸುವಂತೆ ಮಾಡಲು ಸರ್ಕಾರ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ.

3 ಕೋಟಿ ಜನರ ಬೆಂಬಲದ ನಿರೀಕ್ಷೆ:

ವಿಶ್ವಸಂಸ್ಥೆ 2007ರ ಸೆ.15 ಅನ್ನು ವಿಶ್ವ ಪ್ರಜಾಪ್ರಭುತ್ವದ ದಿನ ಎಂದು ಘೋಷಿಸಿತ್ತು. ಇದರ ಅಂಗವಾಗಿ ಅನೇಕ ದೇಶಗಳಲ್ಲಿ ಅಂದು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ. ಆದರೆ ಇದರ ಮೌಲ್ಯವನ್ನು ಹೆಚ್ಚು ಪ್ರಚಾರ ಮಾಡಿ ವಿಶ್ವ ಮಟ್ಟದಲ್ಲಿ ಸಾರುವ ಪ್ರಯತ್ನಕ್ಕೆ ಸರ್ಕಾರ ಈ ಹಿಂದೆಯೇ ಕೈ ಹಾಕಿತ್ತು. ಹೀಗಾಗಿ ಕಳೆದ ವರ್ಷ 2023 ಸೆ.15ರಂದು ರಾಜ್ಯಾದ್ಯಂತ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕಾರ್ಯಕ್ರಮ ನಡೆಸಲಾಗಿತ್ತು. ಇದರಲ್ಲಿ ಸುಮಾರು 2.3 ಕೋಟಿ ಭಾಗವಹಿಸಿ ಸರ್ಕಾರಕ್ಕೆ ಆಶ್ಚರ್ಯ ಉಂಟು ಮಾಡಿದ್ದರು. ಇದರಿಂದ ಸ್ಫೂರ್ತಿ ಪಡೆದ ಸರ್ಕಾರ  ಈ ಬಾರಿ 25 ಲಕ್ಷ ಜನರು ರಾಜ್ಯದುದ್ದಕ್ಕೂ ನಿಂತು ಸಂವಿಧಾನ ಓದುವಂತೆ ಮಾಡುತ್ತಿದೆ. ಹೀಗಾಗಿ ಇದರಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 3 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಿಂದ ಇಡೀ ವಿಶ್ವ ಕರ್ನಾಕದ ಕಡೆ ನೋಡುವಂತಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಜಿಲ್ಲೆಗಳು ಸಕಲ ರೀತಿಯಲ್ಲಿ ಸಜ್ಜು:

ಭಾನುವಾರ ಬೆಳಗ್ಗೆ 9 ಗಂಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ಸಂವಿಧಾನದ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಿದ್ದಾರೆ. ಆನಂತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಗಳ ಸಮಸ್ತ ಜನರು ಸಂವಿಧಾನ ಪೀಠಿಕೆ ಓದಿ ಮಾನವ ಸರಪಳಿ ನಿರ್ಮಿಸುತ್ತಾರೆ. ಆ ಪ್ರದೇಶದಲ್ಲೇ ಗಿಡ ನೆಡುತ್ತಾರೆ. ಹೀಗಾಗಿ ಪ್ರತಿ ಜಿಲ್ಲೆ ತಾಲೂಕುಗಳಲ್ಲೂ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡದಲ್ಲಿ ಕೆಲವರು ಸಮುದ್ರದಲ್ಲೇ ನಿಂತು ಮನವ ಸರಪಳಿ ರಚಿಸಲಿದ್ದಾರೆ.

ಇದೇ ರೀತಿ ವೇಷ, ಭೂಷಣ ಹಾಗೂ ವಿಶೇಷ ಸಂದೇಶ ಸಾರುವ ವಿಭಿನ್ನ ಪ್ರಯತ್ನ ಮಾಡಿದ ಜಿಲ್ಲೆಗೆ ಪ್ರಶಸ್ತಿಯನ್ನೂ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular