HomeKarnatakaಕಾಂಗ್ರೆಸ್ ಶಾಸಕರು 134, ಸಚಿವರು 149: ಕರ್ನಾಟಕದ ಜನರ ತೆರಿಗೆ ಹಣವೆಲ್ಲ ಇವರ ಸೌಲಭ್ಯಕ್ಕೆ!

ಕಾಂಗ್ರೆಸ್ ಶಾಸಕರು 134, ಸಚಿವರು 149: ಕರ್ನಾಟಕದ ಜನರ ತೆರಿಗೆ ಹಣವೆಲ್ಲ ಇವರ ಸೌಲಭ್ಯಕ್ಕೆ!

ಕರ್ನಾಟಕದಲ್ಲಿ ಇರುವ ಕಾಂಗ್ರೆಸ್ ಶಾಸಕರು 134. ಆದರೆ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವವರು 149 ಜನರು. ರಾಜ್ಯದ ಜನರ ತೆರಿಗೆ ಹಣ ಇವರ ಸ್ಥಾನಮಾನ, ವೇತನ, ಸೌಲಭ್ಯಗಳಿಗೆ ಹೋಗುತ್ತಿದೆ. ಹೌದು ಅಚ್ಚರಿಯಾದರೂ ಇದು ಸತ್ಯ.

ಫೆಬ್ರವರಿ 7ರಂದು ಕರ್ನಾಟಕ ಸರ್ಕಾರ ಪ್ರಸ್ತುತ ಕಾರ್ಯ ನಿರ್ವಹಣೆ ಮಾಡುತ್ತಿರುವ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ರಾಜ್ಯ ಸಚಿವರ ಸ್ಥಾನಮಾನ ನೀಡಿ ಆದೇಶಿಸಿದೆ.

ಹೀಗೆ ರಾಜ್ಯ ಸಚಿವರ ಸ್ಥಾನಮಾನ ಪಡೆದ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರುಗಳು ಒಟ್ಟು 54. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿರುವ ಸಂಪುಟ ದರ್ಜೆ ಸಚಿವರು, ರಾಜ್ಯ ಸಚಿವರನ್ನು ಹೊರತುಪಡಿಸಿ 54 ಜನರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ಈಗ ಚರ್ಚೆಗಳು ನಡೆಯುತ್ತಿವೆ. ಕಾರಣ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದರೆ ಅವರಿಗೆ ವೇತನ, ಭತ್ಯ ಸೇರಿ ವಿವಿಧ ಸೌಲಭ್ಯ ನೀಡಬೇಕಾಗುತ್ತದೆ. ಇದಕ್ಕೆ ಜನರ ತೆರಿಗೆ ಹಣ ಪೋಲಾಗುತ್ತದೆ.

ಸಿಗುವ ಸೌಲಭ್ಯಗಳು

  • ಮಾಸಿಕ ವೇತನ 50,000
  • ಆತಿಥ್ಯ ಭತ್ಯೆ 3,000
  • ಮನೆ ಬಾಡಿಗೆ ಭತ್ಯೆ  80,000
  • ಮನೆ ನಿರ್ವಹಣೆ, ಸಿಬ್ಬಂದಿ ಭತ್ಯೆ 20,000
  • ದಿನಭತ್ಯೆ ರಾಜ್ಯದಲ್ಲಿ 2,000, ಹೊರ ರಾಜ್ಯಕ್ಕೆ ಹೋದರೆ 2,500

ಇಷ್ಟು ಮಾತ್ರವಲ್ಲ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿದರೆ ಅವರ ವೈದ್ಯಕೀಯ ವೆಚ್ಚ ಮರು ಪಾವತಿ ಮಾಡಲಾಗುತ್ತದೆ. ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕ, ಬೆರಳಚ್ಚುಗಾರರು, ಚಾಲಕರು, ಅಟೆಂಡರ್ ಸೌಲಭ್ಯ ನೀಡಲಾಗುತ್ತದೆ.

ಈ ಕುರಿತು ವಿವಿಧ ರಾಷ್ಟ್ರೀಯ ಮಾಧ್ಯಮಗಳಲ್ಲೂ ವರದಿ ಪ್ರಸಾರವಾಗಿದೆ. ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷ ಬಿಜೆಪಿ ಸಹ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, ‘ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ನಿಲ್ಲುವ ಯಾವ ಲಕ್ಷಣವೂ ಇಲ್ಲದಂತಾಗಿರುವುದು ರಾಜ್ಯದ ದುರ್ದೈವ. ಒಂದೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದೆ ‘ಖಜಾನೆ ಖಾಲಿ’ ಎಂದು ಸಾಧ್ಯವಿರುವ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿರುವ ಈ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ತನ್ನ 54 ನಿಗಮ, ಮಂಡಳಿ ಅಧ್ಯಕ್ಷರಿಗೆ ಹೆಚ್ಚಿನ ಸ್ಥಾನಮಾನಕ್ಕೆ ಆದೇಶಿಸಿ, ಕಾಂಗ್ರೆಸ್ ಮುಖಂಡರಿಗೂ ‘ಸಚಿವ ಸ್ಥಾನಮಾನ’ದ ಭಾಗ್ಯ ಕರುಣಿಸಿದೆ’ ಎಂದು ಟೀಕಿಸಿದ್ದಾರೆ.

‘ಸಮಾಜವಾದದ ಮುಖವಾಡ ಧರಿಸಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರೇ ಇದಕ್ಕೆ ಉತ್ತರಿಸಬೇಕು. ತಮ್ಮ ಅಸಮರ್ಥ ಆಡಳಿತದಿಂದಾಗಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬರೆ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಮುಖಂಡರ ಸೌಕರ್ಯ, ಸವಲತ್ತು ಹೆಚ್ಚಳಕ್ಕೆ ಬಳಸುವುದು ಯಾವ ಸೀಮೆ ನ್ಯಾಯ?’ ಎಂದು ಪ್ರಶ್ನೆ ಮಾಡಿದ್ದಾರೆ.

‘ವಿಪರ್ಯಾಸವೆಂದರೆ, ಗ್ಯಾರಂಟಿಗಳ ಈಡೇರಿಕೆ ಹೆಸರಿನಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಹಿಂದುಳಿದ ಸಮುದಾಯಗಳಿಗೆ, ಅಭಿವೃದ್ಧಿ ನಿಗಮ, ಮಂಡಳಿಗಳಿಂದ ಕಾಂಗ್ರೆಸ್ ಸರ್ಕಾರ ಯಾವ ಭಾಗ್ಯವನ್ನೂ ಕಲ್ಪಿಸಲಿಲ್ಲ. ಅನುದಾನ ಕಡಿತ ಮಾಡಿ, ಇದ್ದ ಅಲ್ಪ-ಸ್ವಲ್ಪ ಕಲ್ಯಾಣ ಕಾರ್ಯಗಳಿಗೂ ಕಲ್ಲು ಹಾಕಿದ್ದು ಸಾಲದು ಎಂಬಂತೆ, ಈಗ ತನ್ನ ಪಕ್ಷದ ಮುಖಂಡರಿಗೆ ಸಚಿವ ಸ್ಥಾನಮಾನ ನೀಡಿ, ಜನರ ತೆರಿಗೆ ಹಣದಲ್ಲಿ ಮೆರೆಯಲು ಅನುಕೂಲ ಮಾಡಿಕೊಟ್ಟಿದೆ’ ಎಂದು ದೂರಿದ್ದಾರೆ.

‘ಶೂನ್ಯ ಅಭಿವೃದ್ಧಿ, ಅಧಿಕಾರಕ್ಕಾಗಿ ಕುರ್ಚಿ ಕಿತ್ತಾಟ, ಕಾನೂನು ಸುವ್ಯವಸ್ಥೆಯ ವೈಫಲ್ಯ ಹಾಗೂ ದಿವಾಳಿಯಾಗಿರುವ ಅರ್ಥವ್ಯವಸ್ಥೆಯಿಂದಾಗಿ ಕರ್ನಾಟಕವನ್ನು ಅಂಧಕಾರಕ್ಕೆ ತಳ್ಳಿರುವ ಈ ಕಾಂಗ್ರೆಸ್ ಸರ್ಕಾರ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಕೇವಲ ತಮ್ಮ ಅಧಿಕಾರದಾಹಕ್ಕಾಗಿ, ಈಗ ನಿಗಮ-ಮಂಡಳಿಗಳಿಗೆ ಕ್ಯಾಬಿನೆಟ್ ದರ್ಜೆ ನೀಡಿ, ಸರ್ಕಾರಿ ಬೊಕ್ಕಸವನ್ನು ಲೂಟಿ ಮಾಡುತ್ತಿದೆ. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ‘ತುಘಲಕ್ ಆಡಳಿತ’ಕ್ಕೆ ರಾಜ್ಯದ ಜನತೆಯೇ ಅತಿ ಶೀಘ್ರದಲ್ಲೇ ಅಂತ್ಯ ಹಾಡಲಿದ್ದಾರೆ’ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular