alex Certify ರಾಶಿಗಳ ಅವಸ್ಥೆಯ ‘ಫಲ’ಗಳೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಶಿಗಳ ಅವಸ್ಥೆಯ ‘ಫಲ’ಗಳೇನು…?

ಹಿಂದೂ ಧರ್ಮದ ಪ್ರಕಾರ ಮನುಷ್ಯನ ಜೀವಿತದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಅವನ ಜಾತಕದಲ್ಲಿರುವ ಗ್ರಹಗಳ ಸ್ಥಾನ, ದಶಾಕಾಲ ಹಾಗೂ ಅಂತರ್ ದಶಾಕಾಲವನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ಗ್ರಹಗಳ ಅವಸ್ಥೆಯನ್ನು ದೀಪ್ತಾವಸ್ಥೆ, ಸ್ವಸ್ಥಾವಸ್ಥೆ, ಮುದಿತಾವಸ್ಥೆ, ಶಾಂತ, ಶಕ್ತ ಅಥವಾ ವಕ್ರಾವಸ್ಥೆ, ಪೀಡ್ಯ, ದೀನ, ಖಲ, ವಿಖಲ ಹಾಗೂ ಭೀತಸ್ಥ ಅವಸ್ಥೆಯೆಂದು ಜ್ಯೋತಿಷಿಗಳು ವಿಶ್ಲೇಷಿಸುತ್ತಾರೆ.

ಯಾವುದೇ ಒಂದು ಗ್ರಹವು ಜಾತಕದಲ್ಲಿ ಸ್ವಕ್ಷೇತ್ರದಲ್ಲಿದ್ದಾಗ ಸ್ವಸ್ಥಾವಸ್ಥೆಯನ್ನು ಹೊಂದಿರುತ್ತಿದ್ದು, ಈ ಸಂದರ್ಭದಲ್ಲಿ ಜಾತಕನಿಗೆ ಅತಿಶಯ ಸಂಪತ್ತು, ಸಮಾಜದಲ್ಲಿ ಕೀರ್ತಿ, ಗೌರವಗಳು ದೊರೆಯುವುದಲ್ಲದೇ ಆತ ಅತ್ಯಂತ ಬುದ್ಧಿಶಾಲಿಯೂ, ಧೈರ್ಯವಂತನೂ ಆಗುತ್ತಾನೆ. ಇದೇ ರೀತಿ ಒಂದು ಗ್ರಹವು ತನ್ನ ಉಚ್ಛ ಕ್ಷೇತ್ರದಲ್ಲಿದ್ದ ಪಕ್ಷದಲ್ಲಿ ದೀಪ್ತಾವಸ್ಥೆಯನ್ನು ಹೊಂದಿರುತ್ತದೆ. ಆ ಸಂದರ್ಭದಲ್ಲಿ ಜಾತಕನು ಶತ್ರು ವಿನಾಶಕಾರಿಯಾಗಿರುವುದಲ್ಲದೇ ಧನ, ಸಂಪತ್ತು, ಐಶ್ವರ್ಯಗಳು ಯಥೇಚ್ಛವಾಗಿ ಲಭ್ಯವಾಗುತ್ತದೆ.

ಮುದಿತಾವಸ್ಥೆಯಲ್ಲಿ ಗ್ರಹವು ಅಂದರೆ ಮಿತ್ರ ಕ್ಷೇತ್ರದಲ್ಲಿ ಗ್ರಹವಿರುವಾಗ ಜಾತಕನು ಸುಖಮಯ ಜೀವನವನ್ನು ನಡೆಸುತ್ತಾನಲ್ಲದೇ ನ್ಯಾಯ, ಧರ್ಮಯುತವಾದ ಜೀವನ ನಡೆಸುವುದರ ಜೊತೆಗೆ ಆನಂದವನ್ನು ಹೊಂದುವುದು ನಿಶ್ಚಿತ.

ಜಾತಕದಲ್ಲಿ ಶುಭವರ್ಗದಲ್ಲಿರುವ ಗ್ರಹವು ಶಾಂತವಾಗಿದ್ದು, ಈ ಸಮಯದಲ್ಲಿ ಜಾತಕನು ಪ್ರಶಾಂತಚಿತ್ತನಾಗಿದ್ದು ಉನ್ನತ ಪದವಿ ಪಡೆಯುತ್ತಾನೆ. ಅಷ್ಟೇ ಅಲ್ಲ, ಧನ ವಾಹನಾದಿ ಸುಖವು ಪ್ರಾಪ್ತಿಯಾಗುತ್ತದೆ ಅಲ್ಲದೇ ಸಾಮಾನ್ಯವಾಗಿ ಈ ಹಂತದಲ್ಲಿ ಜಾತಕನು ಸ್ವಂತ ಉದ್ಯಮಗಳಲ್ಲಿ ಸಕ್ರಿಯನಾಗುತ್ತಾನೆ. ಯಾವುದೇ ಒಂದು ಗ್ರಹ ವಕ್ರವಾಗಿರುವ ಸಂದರ್ಭದಲ್ಲಿ ಅದನ್ನು ಶಕ್ತಗ್ರಹವೆಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಜಾತಕನಿಗೆ ಸ್ತ್ರೀ, ವಸ್ತ್ರಾಭರಣ, ಸಾಧನೆ ಮತ್ತು ಕೀರ್ತಿ ಪ್ರಾಪ್ತವಾಗುತ್ತದೆ. ಅಲ್ಲದೇ ಈತ ಸಜ್ಜನ, ಪ್ರಸನ್ನಚಿತ್ತನಾಗಿಯೂ ಪರೋಪಕಾರಿಯೂ ಆಗಿ ಪ್ರಖ್ಯಾತನಾಗುತ್ತಾನೆ. ಒಂದು ರಾಶಿಯ ಕೊನೆಯ ನವಾಂಶದಲ್ಲಿರುವ ಗ್ರಹನು ಪೀಡ್ಯನಾಗಿರುತ್ತಿದ್ದು, ಈ ಜಾತಕನಿಗೆ ದುಃಖ, ಶತ್ರುಭಯ, ರೋಗಭಯ ಸದಾ ಇರುವುದಲ್ಲದೇ ಯಾವಾಗಲೂ ಮಾನಸಿಕ ಅಶಾಂತಿಯಿಂದ ಕೂಡಿದವನಾಗುತ್ತಾನೆ.

ಶತ್ರು ಸ್ಥಾನದಲ್ಲಿರುವ ಗ್ರಹವೇ ದೀನಾವಸ್ಥೆಯಾಗಿರುತ್ತಿದ್ದು, ಈ ಗ್ರಹದಿಂದ ಜಾತಕನು ಧನ ನಾಶ, ಶತ್ರುಬಾಧೆ, ರೋಗಬಾಧೆ ಹೀಗೆ ನಾನಾ ವಿಧದ ತೊಂದರೆಗಳಿಂದ ಬಳಲುವುದರಲ್ಲಿ ಯಾವುದೇ ಸಂಶಯವಿಲ್ಲ. ನೀಚ ಸ್ಥಾನದಲ್ಲಿರುವ ಗ್ರಹನು ‘ಖಲ’ಎಂಬ ನಾಮವನ್ನು ಪಡೆಯುತ್ತಾನೆ. ಈ ಸಂದರ್ಭದಲ್ಲಿ ಜಾತಕನು ಅತಿಶಯ ದುಃಖ, ಧನನಷ್ಟ, ಪಿತ್ರಾರ್ಜಿತವಾಗಿ ಬಂದಂತಹ ಸಂಪತ್ತಿನ ಹಾನಿ, ಉದ್ಯೋಗದಲ್ಲಿ ಅಸ್ಥಿರತೆಯು ಸದಾ ಕಾಡುವುದಲ್ಲದೇ ಮಾನಸಿಕವಾಗಿ ಜರ್ಝರಿತನಾಗುತ್ತಾನೆ.

ಜಾತಕದಲ್ಲಿ ಯಾವುದೇ ಒಂದು ಗ್ರಹವು ಅಸ್ತಂಗತವಾಗಿದ್ದರೆ ಅದನ್ನು ವಿಖಲಾವಸ್ಥೆ ಎನ್ನುತ್ತಾರೆ. ಈ ಸಂದರ್ಭದಲ್ಲಿ ಜಾತಕನಿಗೆ ಮಾನಸಿಕ ಸ್ಥಿರತೆ ತಪ್ಪುವುದಲ್ಲದೇ, ಬಲಹೀನತೆ, ಸ್ತ್ರೀವಿಯೋಗ, ಅಧಿಕಾರ ಪದಚ್ಯುತಿ, ಸಾಲದ ಬಾಧೆ ಹೀಗೆ ಹಲವಾರು ಸಮಸ್ಯೆಗಳು ತಲೆದೋರುತ್ತವೆ. ಅದೇ ರೀತಿ ಜಾತಕದಲ್ಲಿ ಒಂದು ಗ್ರಹವು ಅತಿಚಾರದಲ್ಲಿದ್ದರೆ ಅದನ್ನು ಭೀತಸ್ಥವೆಂದು ಪರಿಗಣಿಸುತ್ತಾರೆ. ಈ ಹಂತದಲ್ಲಿ ಭೀತಗ್ರಹನು ಜಾತಕನ ಸ್ಥಾನ ಚ್ಯುತಿ, ಧನಹಾನಿ, ಅತಿಯಾದ ಭಯ ಕಾಡುವುದಲ್ಲದೇ ಸ್ವಜನರೊಂದಿಗೆ ಕಲಹ, ಉದ್ಯೋಗ, ವ್ಯವಹಾರದಲ್ಲಿ ಅಸ್ಥಿರತೆ ಕಂಡುಬರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...