ನಾವು ತಿನ್ನುವ ಆಹಾರ, ವಾತಾವರಣದ ಏರುಪೇರಿನಿಂದ ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುತ್ತದೆ. ಇದರಲ್ಲಿ ಹೆಚ್ಚು ಕಾಡುವ ಸಮಸ್ಯೆಯೆಂದರೆ ಒಣ ಕೆಮ್ಮು. ಇದು ಒಮ್ಮೆ ಶುರುವಾಯಿತೆಂದರೆ ಇಡೀ ಜೀವವನ್ನು ಹಿಂಡಿಹಿಪ್ಪೆ ಮಾಡಿಸುತ್ತದೆ.
ರಾತ್ರಿ ಮಲಗುವ ವೇಳೆ ಇದು ಹೆಚ್ಚು ಕಾಡುತ್ತದೆ. ಕೆಲವೊಂದು ಮನೆಮದ್ದುಗಳನ್ನು ಉಪಯೋಗಿಸಿಕೊಂಡು ಇದನ್ನು ಕಡಿಮೆ ಮಾಡಿಕೊಳ್ಳಬಹುದು.
*ರಾತ್ರಿ ಮಲಗುವ ಮೊದಲು ಒಂದು ಲೋಟ ಬಿಸಿ ಹಾಲಿಗೆ ಸ್ವಲ್ಪ ಅರಿಶಿನ ಸೇರಿಸಿ ಕುಡಿಯಿರಿ. ಅರಿಶಿನದಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ಗುಣವಿರುವುದರಿಂದ ಇದು ಬ್ಯಾಕ್ಟರೀಯಾದ ವಿರುದ್ಧ ಹೋರಾಡುತ್ತದೆ.
*ಜೇನುತುಪ್ಪ ಕೂಡ ಒಣ ಕೆಮ್ಮುವಿಗೆ ಒಂದು ಅದ್ಭುತವಾದ ಮದ್ದು. 2 ಟೀ ಸ್ಪೂನ್ ಜೇನುತುಪ್ಪವನ್ನು ಒಂದು ಗ್ಲಾಸ್ ಬಿಸಿನೀರಿಗೆ ಅಥವಾ ಹರ್ಬಲ್ ಟೀಗೆ ಸೇರಿಸಿಕೊಂಡು ಕುಡಿದರೆ ಕೆಮ್ಮು ಶಮನವಾಗುತ್ತದೆ.
*ಶುಂಠಿಯಲ್ಲಿ ಆ್ಯಂಟಿ-ಇನ್ ಫ್ಲಾಮೆಟರಿ ಗುಣ ಇರುವುದರಿಂದ ಇದು ಒಣ ಕೆಮ್ಮನ್ನು ನಿವಾರಿಸುತ್ತದೆ. ಅರ್ಧ ತುಂಡು ಶುಂಠಿಯನ್ನು ಚಿಕ್ಕ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಒಂದು ಕಪ್ ನೀರಿಗೆ ಇದನ್ನು ಹಾಕಿ 5 ನಿಮಿಷ ಚೆನ್ನಾಗಿ ಕುದಿಸಿ ನಂತರ ಸೋಸಿಕೊಳ್ಳಿ. 2 ಟೀ ಸ್ಪೂನ್ ಜೇನುತುಪ್ಪ ಹಾಕಿಕೊಂಡು ಹದ ಬಿಸಿ ಇರುವಾಗಲೇ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
*ಇನ್ನು ಮಲಗುವ ಮೊದಲು ಉಗುರು ಬೆಚ್ಚಗಿನ ನೀರಿಗೆ ½ ಟೀ ಸ್ಪೂನ್ ಉಪ್ಪನ್ನು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಕೆಮ್ಮು ಶಮನವಾಗುತ್ತದೆ.