ಬೆಂಗಳೂರು: ಝೊಂಬಿ ಡ್ರಗ್ಸ್ ಸೇವಿಸಿದ್ದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ನಟ ದುನಿಯಾ ವಿಜಯ್ ಅವರಿಗೆ ಸಂಕಷ್ಟ ಎದುರಾಗಿದೆ.
ವ್ಯಕ್ತಿಯೊಬ್ಬ ಜೊಂಬಿ ಡ್ರಗ್ಸ್ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾರೆ ಎಂದು ವಿಡಿಯೋ ಅಪ್ ಲೋಡ್ ಮಾಡಿ ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ್ ರಾವ್ ಹಾಗೂ ನಟ ದುನಿಯಾ ವಿಜಯ್ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡುತ್ತಿದ್ದಾರೆ.
ವಿಡಿಯೋ ಅಪ್ ಲೋಡ್ ಮಾಡಿ, ವೈರಲ್ ಮಾಡಿದ್ದಕ್ಕೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಲು ಬಾಗಲೂರು ಠಾಣೆ ಪೊಲಿಸರು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹಾಗೂ ನಟ ದುನಿಯಾ ವಿಜಯ್ ಗೆ ಸಂಕಷ್ಟ ಎದುರಾಗಿದೆ.
ಕೆಲ ದಿನಗಳ ಹಿಂದೆ ಝೊಂಬಿ ಡ್ರಗ್ಸ್ ಸೇವಿಸಿದ್ದಾನೆ ಎಂಬ ತಪ್ಪು ಮಾಹಿತಿಯೊಂದಿಗೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿದ್ಯಾರಣ್ಯಪುರ ನಿವಾಸಿ ಹೇಮಂತ್ ಎಂಬಾತನ್ನು ಪೊಲೀಸರು ಬಂಧಿಸಿದ್ದರು.
ವ್ಯಕ್ತಿಯೊಬ್ಬ ಝೊಂಬಿ ಡ್ರಗ್ಸ್ ನಶೆಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದಾನೆ ಎಂದು ಹೇಮಂತ್ ಎಂಬಾತ ವ್ಯಕ್ತಿಯೊಬ್ಬ ಒಂದೇ ಸ್ಥಳದಲ್ಲಿ ಗಂಟೆಗಟ್ಟಲೆ ನಿಂತಿರುವುದು, ಅರೆಪ್ರಜ್ಞಾ ಸ್ಥಿತಿಯಲ್ಲಿರುವ ಕೆಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಈ ವಿಡಿಯೀವನ್ನು ಭಾಸ್ಕರ್ ರಾವ್ ಹಾಗೂ ನಟ ದುನಿಯಾ ವಿಜಯ್ ಕೂಡ ಸಾಮಾಜಿಕ ಜಾಕತಾಣಗಳಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಆ ವ್ಯಕ್ತಿಯನ್ನು ಪತ್ತೆ ಮಾಡಿ ರಕ್ತದ ಮಾದರಿ ಪರೀಕ್ಷಿಸಿದ್ದರು. ಆದರೆ ವ್ಯಕ್ತಿ ಯಾವುದೇ ಡ್ರಗ್ಸ್ ಅಥವಾ ಮಾದಕ ವಸ್ತು ಸೇವಿಸಿರಲಿಲ್ಲ. ಆತ ಅನಾರೋಗ್ಯದಿಂದ ಬಳಲುತ್ತಿದ್ದ ನಡೆದಾಡಲು ಕಷ್ಟಪಡುತ್ತಿದ್ದ ಎಂಬುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಪ್ಪು ಮಾಹಿತಿ ಹಂಚಿಕೊಂಡಿದ್ದಾಕ್ಕಾಗಿ ಹೇಮಂತ್ ನನ್ನು ಬಂಧಿಸಲಾಗಿತ್ತು.

