HomeInternationalಮೈ ಕೆರೆಯುವ ಬ್ಯುಸಿನೆಸ್‌ ನಿಂದ ಲಕ್ಷ ಲಕ್ಷ ಹಣ ; ಯುವಕನ ಐಡಿಯಾಗೆ ಮೂಗಿನ ಮೇಲೆ...

ಮೈ ಕೆರೆಯುವ ಬ್ಯುಸಿನೆಸ್‌ ನಿಂದ ಲಕ್ಷ ಲಕ್ಷ ಹಣ ; ಯುವಕನ ಐಡಿಯಾಗೆ ಮೂಗಿನ ಮೇಲೆ ಬೆರಳಿಟ್ಟುಕೊಂಡ ಜನ !

ಹೊಸದಾಗಿ ಯೋಚಿಸುವ ಛಲ ಹಾಗೂ ಜನರ ನಾಡಿಮಿಡಿತ ಅರಿತರೆ ಅತ್ಯಂತ ಸರಳ ಐಡಿಯಾವೂ ಬೃಹತ್ ವ್ಯವಹಾರವಾಗಿ ಬದಲಾಗಬಲ್ಲದು ಎಂಬುದಕ್ಕೆ ಚೀನಾದ ಯುವ ಉದ್ಯಮಿಯೊಬ್ಬರು ಸಾಕ್ಷಿಯಾಗಿದ್ದಾರೆ. ಯಾರಾದರೂ ಬಂದು ತಮ್ಮ ಮೈ-ಬೆನ್ನು ತುರಿಸಿದರೆ ಸಾಕು ಎಂದು ಜನಸಾಮಾನ್ಯರು ಅಂದುಕೊಳ್ಳುವುದು ಸಹಜ. ಆದರೆ, ಇದನ್ನೇ ಒಂದು ವೃತ್ತಿಪರ ಉದ್ಯಮವನ್ನಾಗಿ ಪರಿವರ್ತಿಸಿರುವ ಚೀನಾದ ಯುವಕನೊಬ್ಬ, ಗ್ರಾಹಕರ ಬೆನ್ನು ತುರಿಸುವುದಕ್ಕಾಗಿಯೇ ವಿಶೇಷ ಪಾರ್ಲರ್ ಆರಂಭಿಸಿ ತಿಂಗಳಿಗೆ ಬರೋಬ್ಬರಿ ₹14 ಲಕ್ಷ ಗಳಿಸುತ್ತಿದ್ದಾನೆ!

ಚೀನಾದ ಹುಬೈ ಪ್ರಾಂತ್ಯದ 32 ವರ್ಷದ ಝಾಂಗ್ ಶಿಯಾವೊಕಿಯಾವೊ (Zhang Xiaoqiao) ಎಂಬ ಯುವಕ ಶೆನ್‌ಜೆನ್ ನಗರದಲ್ಲಿ ‘ಸುಮಾ’ (Suma) ಎಂಬ ಬ್ರ್ಯಾಂಡ್‌ನಡಿ ಈ ವಿಚಿತ್ರ ಸೇವೆಯನ್ನು ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಹೇಗಿರುತ್ತೆ ಈ ‘ತುರಿಕೆಯ ಪಾರ್ಲರ್’ ?

ಈ ಕೇಂದ್ರದಲ್ಲಿ ಗ್ರಾಹಕರು ಸಾಂಪ್ರದಾಯಿಕ ಮಸಾಜ್ ಪಾರ್ಲರ್‌ಗಳಂತೆಯೇ ಆರಾಮದಾಯಕ ಮಂಚದ ಮೇಲೆ ಮಲಗಿಕೊಳ್ಳುತ್ತಾರೆ. ಅಲ್ಲಿರುವ ತರಬೇತಿ ಪಡೆದ ಸಿಬ್ಬಂದಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೊನಚಾದ ಉಗುರುಗಳನ್ನು ಬಳಸಿ ಗ್ರಾಹಕರ ಬೆನ್ನು ಹಾಗೂ ತುರಿಕೆ ಇರುವ ಜಾಗಗಳಲ್ಲಿ ಅತ್ಯಂತ ಮೃದುವಾಗಿ ತುರಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರು ತಮ್ಮ ದೇಹದ ಯಾವ ಭಾಗದಲ್ಲಿ ಹೆಚ್ಚು ತುರಿಕೆ ಇದೆ ಎಂಬುದನ್ನು ಸಿಬ್ಬಂದಿಗೆ ಹೇಳಿ, ಅಲ್ಲಿಗೆ ಹೆಚ್ಚಿನ ಗಮನ ನೀಡುವಂತೆ ಸೂಚಿಸಬಹುದು. ಕೆಲವೊಮ್ಮೆ ಇದು ಜುಳುಜುಳು ಎನಿಸಿ ಗ್ರಾಹಕರಿಗೆ ನಗು ತರಿಸುವುದೂ ಉಂಟು.

ಗಂಟೆಗೆ ₹4,200 ಶುಲ್ಕ; ತಿಂಗಳ ಆದಾಯ ₹14 ಲಕ್ಷ !

ಈ ವಿಶಿಷ್ಟ ಸೇವೆಗೆ ಒಂದು ಗಂಟೆಗೆ 300 ಯುವಾನ್, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹4,200 ರೂಪಾಯಿ ದರ ನಿಗದಿಪಡಿಸಲಾಗಿದೆ. ಮಾನಸಿಕ ಒತ್ತಡ ನಿವಾರಣೆ, ಸಂಪೂರ್ಣ ರಿಲ್ಯಾಕ್ಸೇಷನ್ ಹಾಗೂ ಉತ್ತಮ ನಿದ್ರೆಗೆ ಇದು ರಾಮಬಾಣ ಎಂದು ಪ್ರಚಾರ ಮಾಡಲಾಗುತ್ತಿದೆ.

ಶೆನ್‌ಜೆನ್ ನಗರದ ಬಾವೊನ್ ಮತ್ತು ಫುಟಿಯನ್ ಜಿಲ್ಲೆಗಳಲ್ಲಿ ಆರಂಭಿಸಲಾಗಿರುವ ಈ ಎರಡು ಕೇಂದ್ರಗಳಿಂದ ಪ್ರತಿ ತಿಂಗಳು ಸುಮಾರು 100,000 ಯುವಾನ್ (ಸುಮಾರು ₹14 ಲಕ್ಷ ರೂಪಾಯಿ) ಒಟ್ಟು ಆದಾಯ ಬರುತ್ತಿದ್ದು, ವ್ಯವಹಾರವು ಈಗಾಗಲೇ ಲಾಭದ ಹಾದಿಯಲ್ಲಿದೆ. ಇಲ್ಲಿಗೆ ಬರುವ ಒಟ್ಟು ಗ್ರಾಹಕರಲ್ಲಿ ಶೇಕಡಾ 70 ರಷ್ಟು ಮಂದಿ ಪುರುಷರೇ ಆಗಿದ್ದಾರೆ. “ಮಸಾಜ್‌ಗಿಂತಲೂ ಇದು ಮನಸ್ಸಿಗೆ ಹೆಚ್ಚು ಶಾಂತಿ ನೀಡುತ್ತದೆ” ಎಂದು ಹೇಳಿ ನಿರಂತರವಾಗಿ ಬರುವ ಗ್ರಾಹಕರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ ಎಂದು ಸಂಸ್ಥಾಪಕ ಝಾಂಗ್ ತಿಳಿಸಿದ್ದಾರೆ.

ಈ ಐಡಿಯಾ ಹೊಳೆದದ್ದು ಹೇಗೆ ?

ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ಮಹಿಳೆಯೊಬ್ಬರು ತನ್ನ ಪತಿಯ ಬೆನ್ನು ತುರಿಸುತ್ತಿರುವ ಪುಟ್ಟ ವಿಡಿಯೋವೊಂದನ್ನು ಝಾಂಗ್ ನೋಡಿದ್ದರು. ಆ ವಿಡಿಯೋದ ಕಮೆಂಟ್‌ಗಳನ್ನು ಓದಿದಾಗ, “ಯಾರಾದರೂ ನಮಗೆ ಹೀಗೆ ಬೆನ್ನು ತುರಿಸಿದರೆ ನಾವು ಹಣ ಕೊಡಲು ಸಿದ್ಧರಿದ್ದೇವೆ” ಎಂದು ಹಲವರು ಬರೆದಿದ್ದರು. ಇದು ಅವರ ಗಮನ ಸೆಳೆಯಿತು.

ಜೊತೆಗೆ, ಬಾಲ್ಯದಲ್ಲಿ ನಿದ್ರೆ ಬಾರದಿದ್ದಾಗ ತಂದೆ ಪ್ರೀತಿಯಿಂದ ತಮ್ಮ ಬೆನ್ನು ಸವರಿ ತುರಿಸುತ್ತಿದ್ದ ಕ್ಷಣಗಳು ನೆನಪಾದವು. ತಕ್ಷಣವೇ ಈ ಆಲೋಚನೆಯನ್ನು ವ್ಯವಹಾರಿಕವಾಗಿ ರೂಪಿಸಲು ನಿರ್ಧರಿಸಿದರು. ಈ ಹಿಂದೆ ಏಳು ಬೇರೆ ಬೇರೆ ಉದ್ಯೋಗಗಳು ಹಾಗೂ ಎರಡು ಇ-ಕಾಮರ್ಸ್ ಸಂಸ್ಥೆಗಳನ್ನು ಕಟ್ಟಿ ಸೋಲು ಕಂಡಿದ್ದ ಝಾಂಗ್, ಈ ಬಾರಿ ಪ್ರಾಯೋಗಿಕವಾಗಿ ತಂತ್ರಗಳನ್ನು ರೂಪಿಸಿ ಯಶಸ್ವಿಯಾಗಿದ್ದಾರೆ.

ಮುಂದಿನ ಗುರಿ ಚೀನಾದಾದ್ಯಂತ 100 ಶಾಖೆಗಳು:

ಸದ್ಯಕ್ಕೆ ಈ ವಿಚಿತ್ರ ವೃತ್ತಿಯ ಬಗ್ಗೆ ಆನ್‌ಲೈನ್‌ನಲ್ಲಿ ನಗೆ ಹಾಗೂ ಚರ್ಚೆಗಳು ನಡೆಯುತ್ತಿದ್ದರೂ, ಆಧುನಿಕ ಮೆಟ್ರೋ ನಗರಗಳ ಒತ್ತಡದ ಜೀವನದಲ್ಲಿ ಇದಕ್ಕೆ ಭಾರಿ ಬೇಡಿಕೆಯಿದೆ ಎಂದು ಝಾಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ‘ಸುಮಾ’ ಬ್ರ್ಯಾಂಡ್ ಅಡಿಯಲ್ಲಿ ಚೀನಾದಾದ್ಯಂತ ಬರೋಬ್ಬರಿ 100 ಕೇಂದ್ರಗಳನ್ನು ತೆರೆಯಲು ಮತ್ತು ‘ಬೆನ್ನು ತುರಿಸುವುದನ್ನು’ ಅಧಿಕೃತ ವೃತ್ತಿಪರ ಸೇವೆಯನ್ನಾಗಿ ಬೆಳೆಸಲು ಈ ಯುವ ಉದ್ಯಮಿ ಯೋಜನೆ ರೂಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular