ಹೈದರಾಬಾದ್: ಮಗಳು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಚಿವ ಸಂಪುಟದಲ್ಲಿ ತಾಯಿಯ ತಲೆದಂಡವಾಗಿದೆ.ತೆಲಂಗಾಣ ಸರ್ಕಾರದ ಅರಣ್ಯ ಮತ್ತು ಧಾರ್ಮಿಕ ದತ್ತಿ ಸಚಿವೆಯಾಗಿದ್ದ ಕೊಂಡ ಸುರೇಖಾರನ್ನು ಸಂಪುಟದಿಂದ ವಜಾಗೊಳಿಸಿ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಸಚಿವೆ ಕೊಂಡ ಸುರೇಖಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಲಂಗಾಣ ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಲು ಸಿಎಂ ರೇವಂತ್ ರೆಡ್ಡಿ ಸೂಚಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಕಾರ್ಯಾಲಯ ಪ್ರಕಟಣೆ ಹೊರಡಿಸಿದ್ದು, ಸಂಪುಟದಿಂದ ವಜಾಗೊಳಿಸುವಂತೆ ಕೋರಿ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರಿಗೆ ಶಿಫಾರಸು ಕಳುಹಿಸಲಾಗಿದೆ.
ಪಾರ್ಕಲ್ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಕೊಂಡ ಸುರೇಖಾ ಅವರ ಮಗಳು ಕೊಂಡ ಸುಶ್ಮಿತಾ ಪಟೇಲ್, ಸಿಎಂ ರೇವಂತ್ ರೆಡ್ಡಿ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಚಿವೆ ಕೊಂಡ ಸುರೇಖಾ ಅವರ ಮಗಳು ಸುಶ್ಮಿತಾ, ಸಿಎಂ ರೇವಂತ್ ರೆಡ್ಡಿ ಹಾಗೂ ಇತರ ಪಕ್ಷದ ನಾಯಕರ ವಿರುದ್ಧ ನೀಡಿದ್ದ ಹೇಳಿಕೆಗಳು ಆಡಳಿತಾರೂಢ ಕಾಂಗ್ರೆಸ್ ಶಾಸಕರು ಮತ್ತು ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಮೊದಲು ಕಾಂಗ್ರೆಸ್ ಶಿಸ್ತು ಸಮಿತಿಯೂ ಸಹ ಸುರೇಖಾ ಅವರನ್ನು ಸಂಪುಟದಿಂದ ಕೈಬಿಡುವಂತೆ ಶಿಫಾರಸು ಮಾಡಿತ್ತು.
ಪಾರ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಸುಶ್ಮಿತಾ ಪಟೇಲ್ 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಹಾಲಿ ಶಾಸಕ ರೇವೂರಿ ಪ್ರಕಾಶ್ ರೆಡ್ಡಿ ಅವರನ್ನು ಸಿಎಂ ರೇವಂತ್ ರೆಡ್ಡಿ ಬೆಂಬಲಿಸುತ್ತಿರುವುದನ್ನು ಪ್ರಶ್ನಿಸಿದ್ದರು. ನನ್ನ ಟಿಕೆಟ್ ತೀರ್ಮಾನಿಸಲು ರೇವಂತ್ ರೆಡ್ಡಿ ಯಾರು? ಎಂದು ಸುಶ್ಮಿತಾ ಬಹಿರಂಗವಾಗಿ ಕೇಳಿದ್ದರು. ಅಲ್ಲದೇ ಹಾಲಿ ಶಾಸಕರಿಗೆ ರಾಜೀನಾಮೆ ನೀಡಿ ತಮ್ಮ ವಿರುದ್ಧ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸವಾಲು ಹಾಕಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಸಚಿವೆ ಕೊಂಡ ಸುರೇಖಾ ಅವರ ಪುತ್ರಿ ಸುಶ್ಮಿತಾ ಅವರ ಈ ನಡೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಸುರೇಖಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.
ವಿವಾದದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕೊಂಡ ಸುರೇಖಾ, ಮಗಳು ಸುಶ್ಮಿತಾ ನೀಡಿರುವ ಹೇಳಿಕೆಗೆ ತಾಯಿಯನ್ನು ಹೊಣೆಗಾರರನ್ನಾಗಿ ಮಾಡಬಾರದು, ಮಗಳು ಸ್ವತಂತ್ರ ವ್ಯಕ್ತಿ. ಆಕೆಗೆ ಏನು ಮಾತನಾಡಬೇಕು ಎಂಬುದು ತಿಳಿದಿದೆ ಎಂದು ಹೇಳಿದ್ದರು. ತಾವು ಮತ್ತು ತಮ್ಮ ಪತಿ ತೆಲಂಗಾಣದ ಪ್ರಬಲ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಪಕ್ಷಕ್ಕಾಗಿ ಕಷ್ಟಪಟ್ಟು ದುಡಿದಿರುವುದಾಗಿ ಹೈಕಮಾಂಡ್‌ಗೆ ಸ್ಪಷ್ಟ ಪಡಿಸಿದ್ದರು. ಆದರೂ, ಸಚಿವೆ ಕೊಂಡ ಸುರೇಖಾ ಅವರ ಮಗಳ ಹೇಳಿಕೆ ತೆಲಂಗಾಣ ಕಾಂಗ್ರೆಸ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಮಂಗಳವಾರ ದೆಹಲಿಗೆ ತೆರಳಿದ್ದ ಸಿಎಂ ರೇವಂತ್ ರೆಡ್ಡಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸುರೇಖಾ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ನಡೆದ ಸುದೀರ್ಘ ಚರ್ಚೆ ಮತ್ತು ಶಿಸ್ತು ಸಮಿತಿಯ ವರದಿ ಆಧಾರದ ಮೇಲೆ ಅಂತಿಮವಾಗಿ ಸುರೇಖಾ ಅವರನ್ನು ತೆಲಂಗಾಣದ ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ.

