ಬೆಂಗಳೂರು: ಬಳ್ಳಾರಿ ಗಲಾಟೆ-ಫೈರಿಂಗ್ ನಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಹಣ ಪರಿಹಾರ ನೀಡಿದ್ದ ಸಚಿವ ಜಮೀರ್ ಅಹ್ಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗಿದೆ.
ಹಿಂದೂ ಪರ ಸಂಘಟನೆ ಕಾರ್ಯಕರ್ತ ತೇಜಸ್ ಗೌಡ ಎಂಬುವವರು ಸಚಿವ ಜಮೀರ್ ಅಹ್ಮದ್ ವಿರುದ್ಧ ಐಟಿಗೆ ದೂರು ನೀಡಿದ್ದಾರೆ. ಬಳ್ಳಾರಿ ಗಲಾಟೆ-ಫೈರಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರು ಮೃತಪಟ್ಟಿದ್ದರು.
ಘಟನೆ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಚಿವ ಜಮೀರ್ ಅಹ್ಮದ್, ಮೃತ ರಾಜಶೇಖರ್ ಅವರ ನಿವಾಸಕ್ಕೆ ತೆರಳಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈ ವೇಳೆ ಮೃತನ ಕುಟುಂಬಕ್ಕೆ 25 ಲಕ್ಷ ನಗದು ಹಣ ಪರಿಹಾರ ನೀಡಿದ್ದರು. ಇಷ್ಟೊಂದು ದೌಡ್ಡ ಪ್ರಮಾಣದ ನಗದು ಹಣವನ್ನು ಸಚಿವರು ನೀಡಿದ್ದು ಆರ್ ಬಿಐ ನಿಯಮ ಉಲ್ಲಂಘನೆಯಾಗಿದೆ. ಇದು ಕಾಂಗ್ರೆಸ್ ಪಕ್ಷದ ಹಣವೋ, ಸರ್ಕಾರದ ಹಣವೋ ಎಂದು ಸಚಿವರು ಸ್ಪಷ್ಟಪಡಿಸಬೇಕು ಎಂದು ವಿಪಕ್ಷ ಬಿಜೆಪಿ-ಜೆಡಿಎಸ್ ನಾಯಕರು ಆಗ್ರಹಿಸಿದ್ದರು.
ಆರ್ ಬಿಐ ನಿಯಮದ ಪ್ರಕಾರ 2 ಲಕ್ಷ ನಗದು ಹಣಕ್ಕಿಂತ ಹೆಚ್ಚಿನ ಹಣವನ್ನು ಇಟ್ಟುಕೊಳ್ಳುವಂತಿಲ್ಲ. ಆದರೆ ಸಚಿವ ಜಮೀರ್ ಅಹ್ಮದ್ 25 ಲಕ್ಷ ನಗದು ಹಣದ ಗಂಟನ್ನೇ ಮೃತನ ಕುಟುಂಬಕ್ಕೆ ನೀಡಿದ್ದು, ಈ ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಐಟಿ ಇಲಾಖೆಗೆ ದೂರು ನೀಡಲಾಗಿದೆ.

