ಮಾರ್ಚ್ 19ರಂದು ಬಾಲಿವುಡ್ನ ದೊಡ್ಡ ಚಿತ್ರ ಧುರಂಧರ್ ದಿ ರಿವೇಂಜ್ ಜತೆ ತಮಿಳಿನಲ್ಲಿ ಯುವಕರೇ ಸೇರಿ ತಯಾರಿಸಿದ್ದ ಯೂತ್ ಚಿತ್ರ ತೆರೆಗೆ ಬಂದಿತ್ತು.
ಬಿಡುಗಡೆಗೂ ಮುನ್ನ ತನ್ನ ವಿಭಿನ್ನ ಪ್ರಚಾರ, ಲಿರಿಕಲ್ ವಿಡಿಯೊ ಹಾಗೂ ಮುಟ್ಟ ಕಲಕ್ಕಿ ಹಾಡಿನ ಮೂಲಕ ಸದ್ದು ಮಾಡಿದ್ದ ಈ ಚಿತ್ರದ ಮೇಲೆ ತಮಿಳುನಾಡಿನಲ್ಲಿ ಒಂದಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು.
ತಮಿಳಿನ ಕೆಲವು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದ ಕೆನ್ ಕರುಣಾಸ್ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದು, ನಟನೆ ಜತೆಗೆ ಕಥೆ ಬರೆದು ನಿರ್ದೇಶನವನ್ನೂ ಸಹ ಮಾಡಿದ್ದಾರೆ. ಅಲ್ಲದೇ ಒಂದು ಹಾಡನ್ನು ತಾವೇ ಬರೆದು ಗಾಯನವನ್ನೂ ಸಹ ಮಾಡಿದ್ದಾರೆ. ಈ ವಿಷಯ ಸಹ ಚಿತ್ರದ ಕುರಿತು ಪ್ರಚಾರವನ್ನು ಮಾಡಿಕೊಟ್ಟಿತ್ತು.
ಇದರೆಲ್ಲದರ ನಡುವೆ ಬಿಡುಗಡೆಗೊಂಡ ಯೂತ್ ಮೊದಲ ಪ್ರದರ್ಶನದಲ್ಲೇ ಪ್ರೇಕ್ಷಕರ ಮನಗೆದ್ದಿತ್ತು. 23ರ ವರ್ಷದ ಯುವ ಕಲಾವಿದ ಮುಂದಿನ ಸ್ಟಾರ್ ಆಗುವ ಸಾಮರ್ಥ್ಯ ಇರುವ ನಟ ಹಾಗೂ ನಿರ್ದೇಶಕ ಎಂಬ ಪ್ರತಿಕ್ರಿಯೆಯನ್ನು ಪ್ರೇಕ್ಷಕರು ನೀಡಿದ್ದರು. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಯೂತ್ ಸದ್ಯ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದ್ದು, ಅದೇ ರೀತಿಯ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಳ್ಳುತ್ತಿದೆ.
ಚಿತ್ರ 2014ರಿಂದ 2016ರವರೆಗೆ ನಡೆಯುವ ಕಥೆಯನ್ನೊಂದಿದ್ದು, ಮಧ್ಯಮ ವರ್ಗದ ಕುಟುಂಬದ ಎಸ್ಎಸ್ಎಲ್ಸಿ ಓದುವ ಬಾಲಕ ಡಿಗ್ರಿ ವ್ಯಾಸಂಗ ಮಾಡುವ ಯುವಕನಾಗುವ ಏನೆಲ್ಲ ಹಂತಗಳನ್ನು ದಾಟಿ ಬರುತ್ತಾನೆ ಎಂಬುದೇ ಚಿತ್ರದ ಒನ್ಲೈನ್ ಸ್ಟೋರಿ.
ನಾಯಕನ ತಂದೆ ಪುಟ್ಟ ವ್ಯಾಪಾರ ಮಾಡುವ ವೃತ್ತಿ, ತಾಯಿ ಅತಿಯಾದ ದೇವರ ಭಕ್ತೆ. ಕಷ್ಟಪಟ್ಟು ಜೀವನ ಸಾಗಿಸುವ ಮಧ್ಯಮ ವರ್ಗದಲ್ಲಿ ಶಾಲೆ ಕಲಿಯುವ ಮಗನ ಚೇಷ್ಟೆ, ಪ್ರೀತಿ ಪಜೀತಿ ಹಲವು ಚಿತ್ರಗಳ ಹಾಗೆ ಇಲ್ಲೂ ಇದೆ. ಆದರೆ ಅದನ್ನು ಫ್ಲ್ಯಾಷ್ಬ್ಯಾಕ್ಗೆ ಬಳಸದೇ ಚಿತ್ರದ ಕಥೆಯನ್ನು ಇಲ್ಲಿ ನೇರವಾಗಿಯೇ ಹೇಳಲಾಗಿದೆ.
ನಾಯಕನ ಜವಾಬ್ದಾರಿಯಿಲ್ಲದ ನಡವಳಿಕೆ, ವಿದ್ಯಾಭ್ಯಾಸದಲ್ಲಿ ಹಿಂದುಳಿದ ವಿಷಯಗಳಿಂದ ತಂದೆಗೆ ಪುತ್ರನ ಮೇಲೆ ಅತಿಯಾದ ಕೋಪ. ಶಾಲೆ ಮುಗಿಸಿ ಪ್ರಥಮ ಪಿಯುಸಿಗೆ ಬರುವ ನಾಯಕನಿಗೆ ಆತನ ಬಹುದಿನಗಳ ಆಸೆಯಂತೆ ಪ್ರೀತಿ ಆರಂಭವಾಗುತ್ತದೆ. ಸ್ನೇಹಿತರ ಹುಡುಗಾಟ ಆ ಪ್ರೀತಿ ಮುರಿಯುವ ಯತ್ನ ಮಾಡುವುದು, ಅದರ ಪರಿಣಾಮಗಳನ್ನು ಹಾಸ್ಯಾಸ್ಪದವಾಗಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ತೆರೆ ಮೇಲೆ ತಂದಿದ್ದಾರೆ.
ಚಿತ್ರದಲ್ಲಿ ಮಧ್ಯಮ ವರ್ಗದ ಸಣ್ಣ ಕುಟುಂಬಗಳ ವಾತಾವರಣ, ಪ್ರೀತಿ, ಕಾಳಜಿಯ ಅಂಶಗಳನ್ನು ಅಚ್ಚುಕಟ್ಟಾಗಿ ಹೇಳಲಾಗಿದ್ದು, ಯೌವನಾವಸ್ಥೆಯಲ್ಲಿ ಪ್ರೀತಿಗಿಂತ ವಿದ್ಯೆ ಮುಖ್ಯ ಎಂಬ ಅದ್ಭುತ ಸಂದೇಶವನ್ನು ಅಚ್ಚುಕಟ್ಟಾಗಿ ಹೇಳಲಾಗಿದೆ.

