ಭಾರತೀಯ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಒಂದು ನಿರ್ದಿಷ್ಟ ವಯಸ್ಸು ಬರುತ್ತಿದ್ದಂತೆ ಮದುವೆ ಎಂಬ ಮೈಲಿಗಲ್ಲನ್ನು ತಲುಪಿಸಲು ಕುಟುಂಬಸ್ಥರು ತಯಾರಿ ನಡೆಸುತ್ತಾರೆ. ಮಗಳು ಆದಷ್ಟು ಬೇಗ ಸಂಸಾರಸ್ಥಳಾಗಿ ‘ಸೆಟಲ್’ ಆಗಲಿ ಎಂದು ಪೋಷಕರು ಹುಡುಗನ ಹುಡುಕಾಟ ಆರಂಭಿಸುವುದು ಸಾಮಾನ್ಯ. ಆದರೆ, ಇಂದಿನ ಆಧುನಿಕ ಯುಗದ ಮಹಿಳೆಯರು ಇಂತಹ ಸಾಂಪ್ರದಾಯಿಕ ನಿರೀಕ್ಷೆಗಳಿಗೆ ಸವಾಲು ಹಾಕುತ್ತಿದ್ದಾರೆ. ತಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ತಮ್ಮದೇ ಆದ ಷರತ್ತುಗಳ ಮೇಲೆ ತೆಗೆದುಕೊಳ್ಳಲು ಬಯಸುತ್ತಿದ್ದಾರೆ.
ಇದೀಗ ಇಂತಹದ್ದೇ ಒಂದು ಆಘಾತಕಾರಿ ಹಾಗೂ ಅಷ್ಟೇ ವಿಲಕ್ಷಣವಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಪೋಷಕರು ನಿಶ್ಚಯಿಸಿದ್ದ ಅರೇಂಜ್ಡ್ ಮ್ಯಾರೇಜ್ (Arranged Marriage) ವಿರುದ್ಧ ಯುವತಿಯೊಬ್ಬಳು ಪ್ರತಿಭಟಿಸಿದ ರೀತಿಗೆ ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ.
ಕ್ಯಾಮೆರಾ ಮುಂದೆಯೇ ಸಂಪೂರ್ಣ ಮುಂಡನ ! ಕೀರ್ತನಾ ಮೆನನ್ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಆ ವಿಡಿಯೋಗೆ ಕೀರ್ತನಾ, “POV: ನನ್ನ ತಾಯಿ ನನ್ನ ಮದುವೆಗೆ ಪ್ಲಾನ್ ಮಾಡಿದಾಗ…” ಎಂಬ ಒಕ್ಕಣೆಯನ್ನು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ ಕೀರ್ತನಾ ಅತ್ಯಂತ ಶಾಂತವಾಗಿ ಕುಳಿತಿದ್ದು, ಕ್ಷೌರಿಕನೊಬ್ಬ ಆಕೆಯ ತಲೆಯನ್ನು ಸಂಪೂರ್ಣವಾಗಿ ಬೋಳಿಸುತ್ತಿರುವುದು ಕಂಡುಬಂದಿದೆ. ತನ್ನ ತಾಯಿ ತನಗಾಗಿ ಮಾಡಿದ್ದ ಮದುವೆಯ ನಿರ್ಧಾರವನ್ನು ವಿರೋಧಿಸಲು ಆಕೆ ಈ ವಿಪರೀತ ಹೆಜ್ಜೆಯನ್ನು ಇಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ತನ್ನ ಸುಂದರವಾದ ಉದ್ದನೆಯ ಕೂದಲನ್ನು ಪೂರ್ತಿಯಾಗಿ ಕತ್ತರಿಸಿ ಬೋಳಾಗುತ್ತಿದ್ದರೂ, ಇಡೀ ವಿಡಿಯೋದುದ್ದಕ್ಕೂ ಆಕೆ ಎಳ್ಳಷ್ಟೂ ಆತಂಕ ಪಡದೆ ತೀರಾ ಗಂಭೀರವಾಗಿ ಕುಳಿತಿರುವುದು ಎಲ್ಲರ ಗಮನ ಸೆಳೆದಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ ! ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಕೀರ್ತನಾ ಯಾವುದೇ ಹೆಚ್ಚಿನ ಸ್ಪಷ್ಟನೆ ನೀಡಿಲ್ಲ. ಇದು ನಿಜಕ್ಕೂ ಮದುವೆಯ ವಿರೋಧಕ್ಕಾಗಿ ಮಾಡಿದ ಪ್ರತಿಭಟನೆಯೇ? ಅಥವಾ ಯಾವುದಾದರೂ ಧಾರ್ಮಿಕ ಆಚರಣೆ, ದಾನ ಅಥವಾ ಕೇವಲ ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ಮಾಡಿದ ಸ್ಟಂಟ್ ಆ ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಆದಾಗ್ಯೂ, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.
ವಿಡಿಯೋ ನೋಡಿದ ಮಹಿಳೆಯರು ಸೇರಿದಂತೆ ಲಕ್ಷಾಂತರ ಹಲವು ನೆಟ್ಟಿಗರು ಆಕೆಯ ಧೈರ್ಯವನ್ನು ಕೊಂಡಾಡಿದ್ದಾರೆ. “ನಿನ್ನ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ, ನೀನು ತುಂಬಾ ಬಲಿಷ್ಠ ಮನಸ್ಥಿತಿಯನ್ನು ಹೊಂದಿದ್ದೀಯಾ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಇದು ಮಾಡರ್ನ್ ಸಮಸ್ಯೆಗೆ ಲೆಜೆಂಡರಿ ಪರಿಹಾರ” ಎಂದು ನಕ್ಕಿದ್ದಾರೆ.
ಇನ್ನೂ ಕುತೂಹಲದ ಸಂಗತಿಯೆಂದರೆ, ಕೆಲವರು ತಮಗೂ ಇಂತಹ ಅನುಭವ ಆಗಿರುವುದಾಗಿ ಹಂಚಿಕೊಳ್ಳುತ್ತಿದ್ದಾರೆ. “ನನಗೆ 25 ವರ್ಷ ಇದ್ದಾಗ ಮದುವೆ ತಪ್ಪಿಸಲು ನಾನೂ ಇದೇ ರೀತಿ ಗುಂಡು ಮಾಡಿಸಿಕೊಂಡಿದ್ದೆ, ಕಳೆದ 5 ವರ್ಷಗಳಿಂದ ನನಗೆ ಮನೆಯಲ್ಲಿ ಮದುವೆಯ ಯಾವುದೇ ತಾಪತ್ರಯವಿಲ್ಲ!” ಎಂದು ಒಬ್ಬಾಕೆ ಕಮೆಂಟ್ ಮಾಡಿದ್ದಾಳೆ. ಆದರೆ ಉತ್ತರ ಭಾರತದ ನೆಟ್ಟಿಗರೊಬ್ಬರು, “ನಮ್ಮ ಮನೆಯವರಂತೂ ಇಂತಹ ಪರಿಸ್ಥಿತಿಯಲ್ಲಿ ಆರ್ಟಿಫಿಶಿಯಲ್ ವಿಗ್ ತಂದು ತಲೆಗೆ ಇಟ್ಟಾದರೂ ಮದುವೆ ಮಾಡಿಸುತ್ತಾರೆ, ಹಾಗಾಗಿ ನಮಗೆ ಈ ಟ್ರಿಕ್ ವರ್ಕ್ ಆಗಲ್ಲ” ಎಂದು ತಮಾಷೆ ಮಾಡಿದ್ದಾರೆ.
>Her mom asked her to get married.
>She refused saying “I don’t want to get married”.
>Her mom started looking for grooms.
>She came up with a new idea. pic.twitter.com/OaMOqWLDMY
— Mikku 🐼 (@effucktivehumor) July 12, 2026

