ನವದೆಹಲಿ : ದೇಶದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಲ್ಲಿ ‘ಸಮಗ್ರ ದೇಹ ಶಿಕ್ಷಣ’ (Comprehensive Body Education) ಪಠ್ಯವನ್ನು ಪರಿಚಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ದೇಶದಲ್ಲಿ POCSO ಪ್ರಕರಣಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಲ್ಲಿ ‘ಸಮಗ್ರ ದೇಹ ಶಿಕ್ಷಣ’ (Comprehensive Body Education) ಪಠ್ಯವನ್ನು ಪರಿಚಯಿಸಲು ಸರ್ಕಾರ ಸಿದ್ಧತೆ ನಡೆಸಿದ್ದು, ತಜ್ಞರ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ. ಸುಪ್ರೀಂ ಕೋರ್ಟ್ ಅನುಮತಿ ದೊರೆತ ಬಳಿಕ ಈ ಕಾರ್ಯಕ್ರಮವನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.
ತಜ್ಞರ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಅಂಗೀಕರಿಸಿದ್ದು, ನ್ಯಾಯಾಲಯದ ಅನುಮತಿ ದೊರೆತ ತಕ್ಷಣ ಜಾರಿಗೆ ತರುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠದ ಮುಂದೆ ಹೆಚ್ಚುವರಿ ಸೊಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಈ ಮಾಹಿತಿ ನೀಡಿದರು. ಸಮಿತಿ ಸಲ್ಲಿಸಿದ ವರದಿಯನ್ನು ಸರ್ಕಾರ ಒಪ್ಪಿಕೊಂಡಿದ್ದು, ದೇಶವ್ಯಾಪಿ ಜಾರಿಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಸಮಿತಿ ರಚನೆಗೆ ಕಾರಣವೇನು?
ಪರಸ್ಪರ ಸಮ್ಮತಿಯ ಆಧಾರದ ಮೇಲೆ ಕೌಮಾರ ವಯಸ್ಸಿನವರ ನಡುವೆ ಉಂಟಾಗುವ ಸಂಬಂಧಗಳು ಹಾಗೂ ಅಪ್ರಾಪ್ತ ವಯಸ್ಸಿನ ಗರ್ಭಧಾರಣೆಯ ಪ್ರಕರಣಗಳು POCSO ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
ಇದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯವರ ನೇತೃತ್ವದಲ್ಲಿ 26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿತು. ಈ ಸಮಿತಿಗೆ ಪರಸ್ಪರ ಸಮ್ಮತಿಯ ಲೈಂಗಿಕ ಸಂಬಂಧಗಳು, ಕೌಮಾರ ವಯಸ್ಸಿನವರ ಗೌಪ್ಯತೆ ಹಕ್ಕು ಹಾಗೂ POCSO ಕಾಯ್ದೆಯ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ನೀಡಲಾಗಿತ್ತು.
ಸಮಿತಿಯ ಪ್ರಮುಖ ಶಿಫಾರಸುಗಳು
ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS), ಕ್ಲಿನಿಕಲ್ ಸೈಕಾಲಜಿಸ್ಟ್ಗಳು, ವಿವಿಧ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಪಠ್ಯಕ್ರಮದಲ್ಲಿ ಈ ಕೆಳಗಿನ ವಿಷಯಗಳನ್ನು ಸೇರಿಸಲು ಶಿಫಾರಸು ಮಾಡಿದೆ.
- ಸಮಗ್ರ ದೇಹ ಶಿಕ್ಷಣ (Comprehensive Body Education)
- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಅರಿವು (Child Abuse Awareness)
- ವೈಯಕ್ತಿಕ ಸ್ವಚ್ಛತೆ (Hygiene)
- ದೇಹದ ಅಂಗಾಂಗಗಳ ಕುರಿತು ಮೂಲಭೂತ ಅರಿವು
- ವೈಯಕ್ತಿಕ ಸುರಕ್ಷತೆ
- ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ (Safe & Unsafe Touch) ಕುರಿತು ಶಿಕ್ಷಣ
ಈ ವಿಷಯಗಳನ್ನು ಪ್ರಾಥಮಿಕ ಶಾಲಾ ಹಂತದಿಂದಲೇ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಕುರಿತು ಸೂಕ್ತ ಪಠ್ಯಕ್ರಮವನ್ನು NCERT ರೂಪಿಸಬೇಕೆಂದು ಸೂಚಿಸಲಾಗಿದೆ.
ವಾರಕ್ಕೆ ಎರಡು ತರಗತಿಗಳು ಕಡ್ಡಾಯ
ರಾಷ್ಟ್ರೀಯ ಶಿಕ್ಷಣ ನೀತಿ-2020 (NEP-2020) ಗುರಿಗಳಿಗೆ ಅನುಗುಣವಾಗಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕೌಮಾರ ವಯಸ್ಸಿನ ಶಿಕ್ಷಣವನ್ನು ಪರಿಚಯಿಸಬೇಕು ಎಂದು ಸಮಿತಿ ತಿಳಿಸಿದೆ.ಪ್ರಾಥಮಿಕ ಹಂತದಿಂದಲೇ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು.ವಾರಕ್ಕೆ ಕನಿಷ್ಠ ಎರಡು ಬಾರಿ ಸಮಗ್ರ ದೇಹ ಶಿಕ್ಷಣದ ತರಗತಿಗಳನ್ನು ನಡೆಸಬೇಕು.ಪ್ರತಿ ತರಗತಿ 15ರಿಂದ 20 ನಿಮಿಷಗಳ ಅವಧಿಯದ್ದಾಗಿರಬೇಕು.ಮಕ್ಕಳ ಬೆಳವಣಿಗೆಯ ಹಂತಗಳು ಹಾಗೂ ದೇಹ ಶಿಕ್ಷಣದ ಮಹತ್ವದ ಕುರಿತು ಪೋಷಕರು, ಪಾಲಕರು ಮತ್ತು ಶಿಕ್ಷಕರಿಗೆ ವಿಶೇಷ ಜಾಗೃತಿ ಸಭೆಗಳನ್ನು ಆಯೋಜಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ
ಸಮಿತಿಯ ವರದಿಯನ್ನು ಹಿರಿಯ ವಕೀಲರಾದ ಮಾಧವಿ ದಿವಾನ್ ಮತ್ತು ಲಿಜ್ ಮ್ಯಾಥ್ಯೂ ಸ್ವಾಗತಿಸಿದ್ದಾರೆ. ಆದರೆ ‘ಸಮಗ್ರ ದೇಹ ಶಿಕ್ಷಣ’ ಎಂಬ ಪರಿಕಲ್ಪನೆಯನ್ನು ಇನ್ನಷ್ಟು ಸ್ಪಷ್ಟವಾಗಿ ವ್ಯಾಖ್ಯಾನಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಸೂಕ್ತ ಆದೇಶಗಳನ್ನು ಹೊರಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

