ಕೆಲವರ ನಿರ್ಲಕ್ಷ್ಯವು ಅಮಾಯಕ ಯುವತಿಯೊಬ್ಬಳ ಜೀವವನ್ನು ಬಲಿತೆಗೆದುಕೊಂಡಿರುವ ದುರ್ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಬಂಜಿ ಜಂಪ್ ಮಾಡಲು ಮುಂದಾದ ಯುವತಿಗೆ ಸುರಕ್ಷತಾ ಹಗ್ಗ (Safety Rope) ಕಟ್ಟುವುದನ್ನು ಸಿಬ್ಬಂದಿ ಮರೆತ ಪರಿಣಾಮ ಆಕೆ ಎತ್ತರದ ಸ್ಥಳದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಈ ಭಯಾನಕ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜೂನ್ 13ರಂದು ಬ್ರೆಜಿಲ್‌ನ ಸಾಂ ಪೌಲೊ ನಗರದಲ್ಲಿ ಈ ಘಟನೆ ನಡೆದಿದೆ. ಬಂಜಿ ಜಂಪ್‌ಗೆ ಅಗತ್ಯವಾದ ಸುರಕ್ಷತಾ ಸಾಧನಗಳನ್ನು ಅಳವಡಿಸದೇ ಇದ್ದರೂ ಸಿಬ್ಬಂದಿ ಯುವತಿಯನ್ನು ಎತ್ತರದ ವೇದಿಕೆಯಿಂದ ಜಿಗಿಯಲು ಅವಕಾಶ ನೀಡಿದ್ದಾರೆ. ಹಗ್ಗವಿಲ್ಲದೆ ಕೆಳಗೆ ಬಿದ್ದ ಆಕೆ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದು, ನಿರ್ಲಕ್ಷ್ಯಕ್ಕೆ ಕಾರಣರಾದ ಆರು ಮಂದಿಯನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತನಿಖೆ ವೇಳೆ ಯುವತಿಗೆ ಸುರಕ್ಷತಾ ಹಗ್ಗ ಕಟ್ಟುವುದನ್ನೇ ಸಿಬ್ಬಂದಿ ಮರೆತಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.
ಈ ಕುರಿತು ಪೊಲೀಸರು ಮಾತನಾಡಿ, ಸಾಹಸ ಕ್ರೀಡೆಗಳು ಸಂಪೂರ್ಣವಾಗಿ ಸುರಕ್ಷತಾ ಕ್ರಮಗಳು ಮತ್ತು ಪರಸ್ಪರ ನಂಬಿಕೆಯ ಮೇಲೆ ಅವಲಂಬಿತವಾಗಿರುತ್ತವೆ. ಸಣ್ಣ ನಿರ್ಲಕ್ಷ್ಯವೂ ಒಂದು ಅಮೂಲ್ಯ ಜೀವವನ್ನು ಕಸಿದುಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

