ಭಾರತೀಯ ಪ್ರೀಮಿಯರ್ ಲೀಗ್ (IPL) ಮತ್ತು ಪಾಕಿಸ್ತಾನ್ ಸೂಪರ್ ಲೀಗ್ (PSL) ನಡುವೆ ನಡೆಯುತ್ತಿರುವ ಅನಗತ್ಯ ಹೋಲಿಕೆಗಳ ಬಗ್ಗೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಆಕ್ರೋಶ ಹೊರಹಾಕಿದ್ದಾರೆ. ಪಿಎಸ್ಎಲ್ 2026ರ ಹರಾಜಿನಲ್ಲಿ ಯಾವುದೇ ತಂಡಕ್ಕೆ ಆಯ್ಕೆಯಾಗದ ಶೆಹಜಾದ್, ಈ ಬಾರಿ ತಮ್ಮದೇ ದೇಶದ ಕ್ರಿಕೆಟ್ ಮಂಡಳಿ ಮತ್ತು ಲೀಗ್‌ನ ಗುಣಮಟ್ಟವನ್ನು ಕಟುವಾಗಿ ಟೀಕಿಸಿದ್ದಾರೆ.
ಐಪಿಎಲ್‌ನಲ್ಲಿ ಬೇಡವಾದವರೇ ಇಲ್ಲಿ ಆಟಗಾರರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶೆಹಜಾದ್, “ಪಿಎಸ್ಎಲ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಐಪಿಎಲ್‌ನಲ್ಲಿ ಹರಾಜಾಗದವರು ಅಥವಾ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದವರು. ಐಪಿಎಲ್‌ನಲ್ಲಿ ಆಡಲು ಸಣ್ಣ ಅವಕಾಶ ಸಿಕ್ಕರೂ ಯಾವುದೇ ಆಟಗಾರ ಪಿಎಸ್ಎಲ್ ತೊರೆದು ಅಲ್ಲಿಗೇ ಹೋಗುತ್ತಾನೆ. ಹೀಗಿರುವಾಗ ಇನ್ನು ಎಷ್ಟು ಜನ ವಿದೇಶಿ ಆಟಗಾರರನ್ನು ನೀವು ನಿಷೇಧಿಸುತ್ತೀರಿ?” ಎಂದು ಪಿಸಿಬಿ (PCB) ವಿರುದ್ಧ ಕಿಡಿಕಾರಿದ್ದಾರೆ. ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರಂತಹ ಆಟಗಾರರು ಐಪಿಎಲ್ ವೃತ್ತಿಜೀವನದ ಅಂತ್ಯದಲ್ಲಿದ್ದಾಗ ಮಾತ್ರ ಇಲ್ಲಿಗೆ ಬರುತ್ತಾರೆ ಎಂಬ ಕಟು ಸತ್ಯವನ್ನು ಅವರು ನೆನಪಿಸಿದ್ದಾರೆ.
ರೈಲಿ ರೂಸೋ ಹೇಳಿಕೆಗೆ ತಿರುಗೇಟು ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಆಟಗಾರ ರೈಲಿ ರೂಸೋ, “ಐಪಿಎಲ್ ಒಂದು ಬಾಲಿವುಡ್ ಸಿನಿಮಾ ಇದ್ದಂತೆ, ಆದರೆ ನೈಜ ಕ್ರಿಕೆಟ್ ನಡೆಯುವುದು ಪಿಎಸ್ಎಲ್‌ನಲ್ಲಿ” ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶೆಹಜಾದ್, “ರೂಸೋ ಅವರು ಪಿಎಸ್ಎಲ್‌ನಲ್ಲಿ ಆಡುತ್ತಿರುವಾಗ ಐಪಿಎಲ್ ಅನ್ನು ಹೊಗಳಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶ್ರೀಲಂಕಾದ ಕುಸಲ್ ಮೆಂಡಿಸ್ ಅವರಿಗೂ ಐಪಿಎಲ್ ಬಗ್ಗೆ ಮುಜುಗರದ ಪ್ರಶ್ನೆಗಳನ್ನು ಕೇಳಲಾಗುತ್ತಿದೆ” ಎಂದು ಕಿಡಿಗೇಡಿ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಐಪಿಎಲ್ ಒಪ್ಪಂದಕ್ಕಾಗಿ ಪಿಎಸ್ಎಲ್ ತೊರೆಯುವ ವಿದೇಶಿ ಆಟಗಾರರ ಮೇಲೆ ನಿಷೇಧ ಹೇರುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕ್ರಮವು ಮೂರ್ಖತನದಿಂದ ಕೂಡಿದೆ ಎಂದು ಶೆಹಜಾದ್ ಹೇಳಿದ್ದಾರೆ. ಜಗತ್ತಿನ ಯಾವುದೇ ಆಟಗಾರನ ಮೊದಲ ಆದ್ಯತೆ ಐಪಿಎಲ್ ಆಗಿರುತ್ತದೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವಂತೆ ಅವರು ಕಿವಿಮಾತು ಹೇಳಿದ್ದಾರೆ.

