ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರ ಹೆಸರನ್ನು ಪೊಲೀಸರು ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಚಿವರ ಮನೆಯಲ್ಲಿಯೇ ಮೊಬೈಲ್ ಎಕ್ಸ್ ಚೇಂಜ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸೀಮಂತ್ ಕುಮಾರ್ ಸಿಂಗ್, ಸ್ಟಿಂಗ್ ಆಪರೇಷನ್ ವಿಚಾರವಾಗಿ ತನಿಖೆ ಚುರುಕುಗೊಳಿಸಲಾಗಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಯಲ್ಲಿ ಮೊಬೈಲ್ ಎಕ್ಸ್ ಚೇಂಜ್ ಮಾಡಲಾಗಿದೆ. ಈ ಬಗ್ಗೆ ಆರೋಪಿಗಳೇ ಬಾಯ್ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆರೋಪಿ ಜೊತೆಗೆ ಲಿಂಕ್ ಇರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಿಳಾಸದಲ್ಲಿ ಆರೋಪಿ ರಿತೇಶ್ ಪಾಂಡೆ ಇದ್ದರು. ಪ್ರಜ್ವಲ್ ಪ್ರಸಾದ್ ಅವರ ಸೂಚನೆ ಮೇರೆಗೆ ವಿಡಿಯೋ ಅಪ್ಲೋಡ್ ಆಗಿದೆ. ರಿತೀಶ್ ಮತ್ತು ಪ್ರಜ್ವಲ್ ಪ್ರಸಾದ್ಗೆ ಹಣ ವರ್ಗಾವಣೆ ಆಗಿದೆ ಎಂದು ತಿಳಿಸಿದರು.
ವಿಡಿಯೋ ಅಪ್ಲೋಡ್ ಗೆ ಬಳಕೆ ಆಗಿದ್ದ ಮೊಬೈಲ್ ನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದೇ ರೋಚಕವಾಗಿದೆ. ಪ್ರಜ್ವಲ್ ಪ್ರಸಾದ್ ಸೂಚನೆ ಮೇರೆಗೆ ರಿತೇಶ್ ಪಾಂಡೆ ವಿನೋದ್ ಶರ್ಮಾ, ಸೆ.26 ರಂದು ದೆಹಲಿಯಲ್ಲಿ ಮೊಬೈಲ್ ಖರೀದಿಸಿದ್ದರು. ಆದ್ರೆ ಅವರಿಗೆ ಸಿಮ್ ಕಾರ್ಡ್ ಬಳಸಿ ವಿಡಿಯೋ ಅಪ್ಲೋಡ್ ಮಾಡುವ ಪ್ಲಾನ್ ಇರಲಿಲ್ಲ. ಹಾಗಾಗಿ ಮೊಬೈಲ್ ವಿಡಿಯೋ ಅಪ್ಲೋಡ್ ಆದಾಗ ಸಿಮ್ ಕಾರ್ಡ್ ಇರಲಿಲ್ಲ. ಆದರೂ ಪೊಲೀಸರು, ಮೊಬೈಲ್ ಖರೀದಿ ಜಾಲ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಟಿಂಗ್ ಪ್ರಕರಣ ಸಂಬಂಧ ಪೊಲೀಸರು, ಆರೋಪಿ ರಿತೀಶ್ ಕುಮಾರ್ ಹೇಳಿಕೆ ದಾಖಲಿಸಿದ್ದರು. ಈ ವೇಳೆ ಪ್ರಜ್ವಲ್ ಪ್ರಸಾದ್ ಸೂಚನೆ ಮೇರೆಗೆ ಮೊಬೈಲ್ ಖರೀದಿಸಿದ್ದಾಗಿ ರಿತೇಶ್ ಹೇಳಿಕೆ ನೀಡಿದ್ದ. ಅಲ್ಲದೆ ಕೇಂದ್ರ ಸಚಿವರ ಮನೆ ಬಳಿ ಬರುವಂತೆ ಹೇಳಿದ್ದರು. ಅಲ್ಲಿ ಅವರಿಗೆ ಮೊಬೈಲ್ ಕೊಟ್ಟಿರೋದಾಗಿ ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾನೆ.
ರಿತೇಶ್ ಹೇಳಿಕೆ ಸಂಬಂಧ ಸತ್ಯಾಸತ್ಯತೆ ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಪ್ರಜ್ವಲ್ ಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ದೆಹಲಿ ಮನೆ ಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

