ಭಾರತ ತಂಡದ ಸ್ಟಾರ್ ಆಲ್ ರೌಂಡರ್ ಶಿವಂ ದುಬೆ ಹಾಗೂ ಅವರ ಪತ್ನಿ ಅಂಜುಮ್ ಖಾನ್ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಅಂಜುಮ್ ಖಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಮತ್ತು ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ತಮ್ಮ ಸುದೀರ್ಘ ವೈವಾಹಿಕ ಜೀವನದ ಸುಂದರ ಮತ್ತು ತಮಾಷೆಯ ಕ್ಷಣಗಳನ್ನೊಳಗೊಂಡ ವಿಡಿಯೋ ತುಣುಕುಗಳನ್ನು ಅಂಜುಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಇಬ್ಬರ ನಡುವಿನ ಆತ್ಮೀಯ ಒಡನಾಟ ಮತ್ತು ದಾಂಪತ್ಯದ ಮಧುರ ಜರ್ನಿಯನ್ನು ಅಭಿಮಾನಿಗಳಿಗೆ ಪರಿಚಯಿಸುವಂತಿವೆ.
ವಿಡಿಯೋದೊಂದಿಗೆ ಪತಿಗೆ ಶುಭ ಕೋರಿ ಮನದಾಳದ ಮಾತುಗಳನ್ನು ಬರೆದುಕೊಂಡಿರುವ ಅಂಜುಮ್, ನಮ್ಮ ಹಳೆಯ ನೆನಪುಗಳು, ಅಂತ್ಯವಿಲ್ಲದ ಪ್ರೀತಿ, ನಗು ಮತ್ತು ಒಟ್ಟಿಗೆ ಕಳೆದ ಪ್ರತಿಯೊಂದು ಅಮೂಲ್ಯ ಕ್ಷಣಗಳು ಅದ್ಭುತವಾಗಿವೆ. ನೀವು ಕೇವಲ ನನ್ನ ಜೀವನ ಸಂಗಾತಿ ಮಾತ್ರವಲ್ಲ, ನನ್ನ ಅತ್ಯುತ್ತಮ ಸ್ನೇಹಿತ ಕೂಡ ಹೌದು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ನಮ್ಮ ಈ ಪಯಣ ಹೀಗೆಯೇ ಸುಂದರವಾಗಿ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತಾ, ತಮ್ಮಿಬ್ಬರಿಗೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.
ಸದ್ಯ ಅಂಜುಮ್ ಖಾನ್ ಅವರ ಈ ಪೋಸ್ಟ್ ಅಭಿಮಾನಿಗಳ ಗಮನ ಸೆಳೆದಿದ್ದು, ನೆಟ್ಟಿಗರು ಹಾಗೂ ಶಿವಂ ದುಬೆ ಅವರ ಆಪ್ತರು ಈ ದಂಪತಿಗೆ ಶುಭ ಹಾರೈಸುತ್ತಿದ್ದಾರೆ. ಇಬ್ಬರ ನಡುವಿನ ಆಳವಾದ ಪ್ರೀತಿ ಮತ್ತು ಪರಸ್ಪರ ಗೌರವವನ್ನು ಈ ವಿಡಿಯೋ ಸಾರುವಂತಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

