“ಜಿಲ್ಲೆಯ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದ ಕಾರಣ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ಕೃಷಿ ಮಾಧ್ಯಮಿಕ ಸಾಲ ಮತ್ತು ಕೆಸಿಸಿ ಸಾಲದ ಮರುಪಾವತಿಯನ್ನು ಮುಂದೂಡುವ ಕುರಿತಂತೆ ನಿರ್ಣಯವನ್ನು ಸಿದ್ದಪಡಿಸಿ ರಿಸರ್ವ್ ಬ್ಯಾಂಕ್‌ಗೆ ಸಲ್ಲಿಸಿ” ಎಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಲೀಡ್ ಬ್ಯಾಂಕ್ ಅಧಿಕಾರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಲ್ಲಿ ಕೃಷಿಕ ಸದಸ್ಯರು ಏಪ್ರಿಲ್ 15ಕ್ಕೆ ಮರುಪಾವತಿಸಬೇಕಾದ ಕೃಷಿ ಮಾಧ್ಯಮಿಕ ಸಾಲದ ಕಂತುಗಳನ್ನು ಒಂದು ವರ್ಷದಿಂದ ಅವಧಿಗೆ ಮುಂದೂಡುವಂತೆ ಮನವಿ ಸಲ್ಲಿಕೆಯಾಗಿದೆ” ಎಂದರು.
“ಏಪ್ರಿಲ್ 30ಕ್ಕೆ ತುಂಬಬೇಕಾದ ಕೆ.ಸಿ.ಸಿ ಸಾಲವನ್ನು ಒಂದು ವರ್ಷದ ವರೆಗೆ ವಢಾಯಿಸಿ ಕೊಡುವ ಕುರಿತಂತೆ, ಶಿರಸಿಯ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿಯ ಅಧಿಕಾರಿಗಳು, ಕೃಷಿಕರ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರವಾಗಿ ಮನವಿಯನ್ನು ಸಲ್ಲಿಸಿದ್ದು, ಇದನ್ನು ಪುರಸ್ಕರಿಸಲಾಗಿದೆ” ಎಂದು ತಿಳಿಸಿದರು.
“ಜಿಲ್ಲೆಯ ಅಡಿಕೆ ಬೆಳೆಗಾರರ ಸಂಕಷ್ಟ ಪರಿಸ್ಥಿತಿಯ ಕುರಿತು ಸಹಮತ ವ್ಯಕ್ತಪಡಿಸಿ, ಸಾಲ ಮರುಪಾವತಿ ಅವಧಿ ಮುಂದೂಡುವ ಬಗ್ಗೆ ಸಭೆಯ ನಿರ್ಣಯ ಸಿದ್ದಪಡಿಸಿ ಕಳುಹಿಸುವಂತೆ” ಸಿಇಒ ಸೂಚಿಸಿದರು.
“ಜಿಲ್ಲೆಯಲ್ಲಿ ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಅನುಪಾತ ಶೇ.46.6 ಇದ್ದು, ಈ ಪ್ರಮಾಣವು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ.60 ಇರಬೇಕಾಗಿದೆ. ಬ್ಯಾಂಕ್‌ಗಳಲ್ಲಿನ ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಣೆ ಮಾಡುವಂತೆ ತಿಳಿಸಿದ ಅವರು, ವಸತಿ ಹಾಗೂ ಶೈಕ್ಷಣಿಕ ಉದ್ದೇಶ, ಸ್ವ ಉದ್ಯೋಗ ಕೈಗೊಳ್ಳುವವರು, ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸದೇ, ಅರ್ಜಿಗಳಲ್ಲಿನ ದೋಷಗಳನ್ನು ಸರಿಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸಾಲದ ಅರ್ಜಿಗಳನ್ನು ಮಂಜೂರು ಮಾಡುವಂತೆ” ತಿಳಿಸಿದರು.
“ಬ್ಯಾಂಕ್‌ಗಳಲ್ಲಿ ದೊರೆಯುವ ವಿವಿಧ ಸಾಲ ಯೋಜನೆಗಳ ಕುರಿತಂತೆ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮತ್ತು ಖಾಸಗಿ ಬ್ಯಾಂಕುಗಳು ಸಾಲ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ಪರಿಶೀಲನೆ ನಡೆಸುವಂತೆ” ಸೂಚಿಸಿದರು.

