ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಯಲಹಂಕ-ಧರ್ಮಾವರಂ ನಡುವಿನ 161 ಕಿ.ಮೀ. ರೈಲು ಮಾರ್ಗದಲ್ಲಿ ರೈಲುಗಳ ಗರಿಷ್ಠ ವೇಗವನ್ನು ಹೆಚ್ಚಳ ಮಾಡಲಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಸಮಯ ಉಳಿತಾಯವಾಗಲಿದೆ.
ಪ್ರಸ್ತುತ ಯಲಹಂಕ-ಧರ್ಮಾವರಂ ಮಾರ್ಗದ ವೇಗ 110 ಕಿ.ಮೀ, ಇದೆ. ಇದನ್ನು 130 ಕಿ.ಮೀ.ಗೆ ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪ್ರಮುಖ ಮಾರ್ಗದಲ್ಲಿ ವೇಗವನ್ನು ಹಂತ ಹಂತವಾಗಿ ಹೆಚ್ಚಿಸುವ ರೈಲ್ವೆಯ ಯೋಜನೆ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವೇಗ ಹೆಚ್ಚಳದಿಂದ ಈ ಮಾರ್ಗದಲ್ಲಿ ಸಂಚರಿಸುವ 40ಕ್ಕೂ ಹೆಚ್ಚು ಪ್ರಯಾಣಿಕ ಮತ್ತು ಸರಕು ಸಾಗಣೆ ರೈಲುಗಳಿಗೆ ಪ್ರಯೋಜನವಾಗಲಿದೆ. ಬೆಂಗಳೂರು ವಿಭಾಗದಲ್ಲಿ ಯಲಹಂಕ-ಧರ್ಮಾವರಂ 130 ಕಿ.ಮೀ.ಗೆ ವೇಗ ಹೆಚ್ಚಿಸುತ್ತಿರುವ 2ನೇ ಮಾರ್ಗವಾಗಿದೆ.
ಅಧಿಕಾರಿಗಳ ಮಾಹಿತಿಯಂತೆ ಈಗಾಗಲೇ ಬೆಂಗಳೂರು-ಜೋಲಾರ್‌ಪಟ್ಟಿ ಮಾರ್ಗವನ್ನು 130 ಕಿ.ಮೀ.ವೇಗಕ್ಕೆ ಅಭಿವೃದ್ಧಿಗೊಳಿಸಲಾಗಿದೆ. ಈಗ ವೇಗ ಹೆಚ್ಚಿಸುವುದರಿಂದ ಬೆಂಗಳೂರನ್ನು ಉತ್ತರ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳೊಂದಿಗೆ ಸಂಪರ್ಕಿಸುವ ರೈಲು ಸೇವೆಗಳ ಪ್ರಯಾಣದ ಸಮಯ ಕಡಿತವಾಗಲಿದೆ.
ರೈಲುಗಳ ಸಮಯಪಾಲನೆಯನ್ನು ಇದು ಸುಧಾರಿಸಲಿದೆ. ಯಲಹಂಕ-ಧರ್ಮಾವರಂ ಈ ಕಾರಿಡಾರ್‌ನಲ್ಲಿ ಸಂಚರಿಸುವ ಪ್ರಮುಖ ರೈಲುಗಳಲ್ಲಿ ಯಶವಂತಪುರ-ಕಾಚಿಗುಡ ವಂದೇ ಭಾರತ್ ಎಕ್ಸ್‌ಪ್ರೆಸ್ ಕೂಡ ಒಂದಾಗಿದ್ದು, ಸುಧಾರಿತ ಹಳಿಗಳ ಗುಣಮಟ್ಟದಿಂದಾಗಿ ಈ ರೈಲಿನ ವೇಗ ಮತ್ತು ಸಮಯಪಾಲನೆಗೆ ಹೆಚ್ಚಿನ ಅನುಕೂಲವಾಗುವ ಸಾಧ್ಯತೆಯಿದೆ.
ಜೋಡಿ ಹಳಿ ಕಾಮಗಾರಿ: ಪೆನುಕೊಂಡ-ಧರ್ಮಾವರಂ ರೈಲು ಮಾರ್ಗವನ್ನು ದ್ವಿಪಥ ಗೊಳಿಸುವ ಯೋಜನೆಯ ಭಾಗವಾಗಿ, ಮಕಾಜಿಪಲ್ಲಿ ಮತ್ತು ಧರ್ಮಾವರಂ ನಡುವಿನ 30.04 ಕಿಮೀ ಉದ್ದದ ದ್ವಿಪಥ ಮಾರ್ಗವನ್ನು ನೈಋತ್ಯ ರೈಲ್ವೆಯು ಕಾರ್ಯಾರಂಭಗೊಳಿಸಿದೆ.
ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಯ ನಂತರ ಅನುಮೋದನೆ ನೀಡಲಾಗಿದೆ. ಈ ದ್ವಿಪಥ ಯೋಜನೆಯು ಮೂಲಸೌಕರ್ಯ ಅಭಿವೃದ್ಧಿಯನ್ನು ಒಳಗೊಂಡಿದೆ. ಇದರಲ್ಲಿ 66 ಸಣ್ಣ ಸೇತುವೆಗಳು, 15 ಕೆಳಸೇತುವೆಗಳು, ಒಂದು ಪಾದಚಾರಿ ಮೇಲ್ಸೇತುವೆ ಮತ್ತು 5 ರೈಲು ಮಾರ್ಗಗಳನ್ನು ಹೊಂದಿರುವ ಸ್ಟೇಷನ್ ಯಾರ್ಡ್ ಅಭಿವೃದ್ಧಿಪಡಿಸಲಾಗಿದೆ.

