ವಿಜಯಪುರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಸರ್ಕಾರ ಅವಕಾಶ ಕೊಟ್ಟರೆ ಎಲ್ಲಾ ಮಕ್ಕಳಿಗೂ ಕೇಸರಿ ಶಾಲು, ಕೇಸರಿ ತಿಲಕವಿಡಿಸಿ ಕಳುಹಿಸುತ್ತೇವೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ. ಇನ್ಮುಂದೆ ಶಾಲೆಯಲ್ಲಿ ಹಾಜರಾತಿ ಹಾಕುವ ವೇಳೆ ‘ಎಸ್ ಸರ್’ ಎನ್ನುವ ಬದಲು ಜೈ ಶ್ರೀರಾಮ್ ಅಂತ ಹೇಳಿ. ಶಿಕ್ಷಕರಿಗೆ ನಮಸ್ಕರಿಸುವಾಗ ಜೈ ಶ್ರೀರಾಮ್ ಎನ್ನಿ ಎಂದು ಕರೆ ನೀಡಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಮತ್ತೆ ಹಿಜಾಬ್ ಧರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಈ ನಡೆ ಖಂಡನೀಯ. ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್ಸಿನವರಿಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.
ಕೇಸರಿ ಶಾಲು ಹಾಕಲು ನಮಗೆ ಹಕ್ಕಿದೆ. ರಾಜ್ಯದ ಎಲ್ಲಾ ಹಿಂದೂಗಳಿಗೆ ಕರೆ ಕೊಡುತ್ತಿದ್ದೇನೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಿಲಕ ಇಟ್ಟು ಕೇಸರಿ ಶಾಲು ಹಾಕಿ ಶಾಲೆಗೆ ಕಳುಹಿಸಿ. ಇವರು ಹೇಗೆ ವಿರೋಧ ಮಾಡುತ್ತಾರೆ? ಹೇಗೆ ತಡೆಯುತ್ತಾರೆ? ಎಂದು ನಾವು ನೋಡುತ್ತೇವೆ ಎಂದರು.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಗೆ ಕಾಂಗ್ರೆಸ್‌ನವರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಕಾಂಗ್ರೆಸ್‌ನವರೇ ಬಿಜೆಪಿ ಸರ್ಕಾರ ಇದ್ದಾಗ ತಮಿಳುನಾಡಿನಲ್ಲಿ ಸ್ಟಾಲಿನ್ ಬೆಲೆ ಇಳಿಕೆ ಮಾಡಿದ್ದಾರೆ. ಹಾಗೆಯೇ ಬಿಜೆಪಿ ಸರ್ಕಾರವೂ ಇಳಿಕೆ ಮಾಡಬೇಕು ಅಂತ ಟ್ವೀಟ್ ಮಾಡಿದ್ದರು. ಈಗ ದಮ್ ಇದ್ದರೆ ಇವರು ಕಡಿಮೆ ಮಾಡಿ ತೋರಿಸಲಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ನಡೆಯುತ್ತಿರುವ ಅನಿವಾರ್ಯ ಕಾರಣಕ್ಕೆ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಸಮರ್ಥಿಸಿ ಕೊಂಡರು.
ನಾನು ವೈಯಕ್ತಿಕವಾಗಿ ವಾಹನ ಬಳಕೆ ಕಡಿಮೆ ಮಾಡಿಕೊಳ್ಳುತ್ತೇನೆ. ನೂರಕ್ಕೆ ನೂರರಷ್ಟು ಮಾಡಿಕೊಳ್ಳುವುದಿಲ್ಲ. ಸುಮ್ಮನೇ ವಿಜಯೇಂದ್ರನಂತೆ ನಾಟಕ ಮಾಡುವುದಿಲ್ಲ. ಎಲ್ಲಿಯವರೆಗೆ ಪ್ರಧಾನ ಮಂತ್ರಿಗಳು ಬಂಗಾರ ತೆಗೆದುಕೊಳ್ಳಬೇಡಿ ಅಂತ ಹೇಳುತ್ತಾರೆಯೋ? ಅಲ್ಲಿಯವರೆಗೆ ಒಂದು ಗುಂಜಿ ಬಂಗಾರ ಕೂಡ ಖರೀದಿಸುವುದಿಲ್ಲ ಎಂದು ಹೇಳಿದರು.

