ಹಿಮಾಚಲ ಪ್ರದೇಶದ ಸುಂದರ ಕ್ರೀಡಾಂಗಣ ಧರಂಶಾಲಾ ಇಂದು ( ಮೇ 17 ) ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಪ್ಲೇಆಫ್ ಸುತ್ತಿಗೆ ಅಧಿಕೃತವಾಗಿ ಲಗ್ಗೆ ಇಟ್ಟ ಮೊದಲ ಪಂದ್ಯಕ್ಕೆ ಸಾಕ್ಷಿಯಾಯಿತು.
ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್‌ಗಳ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಯಶಸ್ವಿಯಾಗಿ ಪ್ಲೇಆಫ್ ಸುತ್ತಿಗೆ ಪ್ರವೇಶ ಪಡೆದುಕೊಂಡ ಮೊದಲ ತಂಡವೆನಿಸಿಕೊಂಡಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಐಯ್ಯರ್ ಹಾಗೂ ಟಿಮ್ ಡೇವಿಡ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 223 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.
ಆರ್‌ಸಿಬಿ ಇನ್ನಿಂಗ್ಸ್: ತಂಡದ ಪರ ಆರಂಭಿಕನಾಗಿ ಕಣಕ್ಕಿಳಿದ ಜೇಕಬ್ ಬೆಥೆಲ್ 11 ರನ್‌ಗೆ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಆದರೆ ಮತ್ತೋರ್ವ ಆರಂಭಿಕ ಆಟಗಾರ ವಿರಾಟ್ ಕೊಹ್ಲಿ 58 ರನ್ ಕಲೆಹಾಕಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನುಳಿದಂತೆ ದೇವದತ್ ಪಡಿಕ್ಕಲ್ 25ಕ್ಕೆ 45, ವೆಂಕಟೇಶ್ ಐಯ್ಯರ್ 40 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 73 ರನ್ ಹಾಗೂ ಟಿಮ್ ಡೇವಿಡ್ 12 ಎಸೆತಗಳಲ್ಲಿ 28 ರನ್ ಬಾರಿಸಿದರು.
ಪಂಜಾಬ್ ಕಿಂಗ್ಸ್ ಪರ ಹರ್‌ಪ್ರೀತ್ ಬ್ರಾರ್ ಎರಡು ವಿಕೆಟ್, ಅರ್ಷ್‌ದೀಪ್ ಸಿಂಗ್ ಹಾಗೂ ಯುಜ್ವೇಂದ್ರ ಚಹಲ್ ತಲಾ ಒಂದೊಂದು ವಿಕೆಟ್ ಪಡೆದರು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್: ಆರ್‌ಸಿಬಿ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಲು ಮುಂದಾದ ಪಂಜಾಬ್ ಕೇವಲ 19 ರನ್‌ಗೆ ತನ್ನ ಪ್ರಮುಖ ಆಟಗಾರರಾದ ಪ್ರಿಯನ್ಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ನಾಯಕ ಶ್ರೇಯಸ್ ಐಯ್ಯರ್ ವಿಕೆಟ್ ಕಳೆದುಕೊಂಡು ಗೆಲುವಿನ ಆಸೆಯನ್ನು ಬಹುತೇಕ ಕೈಚೆಲ್ಲಿತು. ಪ್ರಿಯನ್ಶ್ ಆರ್ಯ ಡಕ್‌ಔಟ್ ಆದರೆ, ಪ್ರಭ್‌ಸಿಮ್ರಾನ್ ಸಿಂಗ್ 2 ಹಾಗೂ ಶ್ರೇಯಸ್ ಐಯ್ಯರ್ ಕೇವಲ 1 ರನ್ ಗಳಿಸಿದರು. ಕೂಪರ್ ಕೊಲೊನಿ, ಸೂರ್ಯನ್ಶ್ ಶೆಡ್ಗೆ, ಮಾರ್ಕಸ್ ಸ್ಟಾಯಿನಿಸ್ ಹಾಗೂ ಶಶಾಂಕ್ ಸಿಂಗ್ ಪ್ರಯತ್ನಿಸಿದರಾದರೂ ತಂಡಕ್ಕೆ ಗೆಲುವನ್ನು ತಂದುಕೊಡಲಾಗಲಿಲ್ಲ. ಕೂಪರ್ ಕೊಲೊನಿ 22 ಎಸೆತಗಳಲ್ಲಿ 37, ಸೂರ್ಯನ್ಶ್ ಶೆಡ್ಗೆ 22 ಎಸೆತಗಳಲ್ಲಿ 35, ಮಾರ್ಕಸ್ ಸ್ಟಾಯಿನಿಸ್ 25 ಎಸೆತಗಳಲ್ಲಿ 37, ಶಶಾಂಕ್ ಸಿಂಗ್ 27 ಎಸೆತಗಳಲ್ಲಿ 56, ಅಜ್ಮತ್‌ಉಲ್ಲಾ ಓಮರ್ಜೈ 14 ಹಾಗೂ ಹರ್‌ಪ್ರೀತ್ ಬ್ರಾರ್ ಅಜೇಯ 5 ರನ್ ಬಾರಿಸಿದರು.
ಆರ್‌ಸಿಬಿ ಪರ ರಸಿಕ್ ಧರ್ ಸಲಾಮ್ ಮೂರು ವಿಕೆಟ್, ಭುವನೇಶ್ವರ್ ಕುಮಾರ್ ಎರಡು ವಿಕೆಟ್, ಜೋಶ್ ಹೇಜಲ್‌ವುಡ್, ಸುಯಶ್ ಶರ್ಮಾ ಹಾಗೂ ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.

