2025-26ನೇ ಸಾಲಿಗೆ ಯಶಸ್ವಿನಿ ಯೋಜನೆಯಡಿ ಅರ್ಹ ಸದಸ್ಯರ ನೋಂದಣಿ ಪ್ರಾರಂಭಿಸಲಾಗಿದ್ದು, ಈ ಯೋಜನೆಯಡಿ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರ ನೋಂದಣಿಗೆ ಮಾರ್ಚ್ 31 ಕೊನೆಯ ದಿನವಾಗಿದೆ.
ಈ ಕುರಿತು ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಡಿ.ರವಿಕುಮಾರ್ ಮಾಹಿತಿ ನೀಡಿದ್ದಾರೆ. ಯಾವುದೇ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್‍ಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಅದರಂತೆ ಈ ಯಶಸ್ವಿನಿ ಯೋಜನೆಯ ವಿಮೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬಹುದು.
ನೋಂದಣಿಗೆ ದಾಖಲೆಗಳು: ಅರ್ಜಿ ನಮೂನೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಯೋಜನೆಗೆ ಒಳಪಡುವ ಸದಸ್ಯರ ಪ್ರತಿಯೊಬ್ಬರ ತಲಾ 2 ಭಾವಚಿತ್ರ, ಗ್ರಾಮೀಣ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಗರಿಷ್ಠ 4 ಸದಸ್ಯರ ಕುಟುಂಬ ಒಂದಕ್ಕೆ ರೂ. 500 ಗಳ ವಂತಿಕೆ ಹಾಗೂ 4 ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.100 ಗಳನ್ನು ಪಾವತಿಸಬೇಕು.
ನಗರ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಗರಿಷ್ಠ 4 ಸದಸ್ಯರ ಕುಟುಂಬ ಒಂದಕ್ಕೆ ರೂ.1 ಸಾವಿರ ವಂತಿಕೆ ಹಾಗೂ 4 ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತೀಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200 ಗಳನ್ನು ಪಾವತಿಸಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉಚಿತ (ಆರ್.ಡಿ ಸಂಖ್ಯೆಯ ಜಾತಿ ಪ್ರಮಾಣ ಪತ್ರ ನೀಡಿದಲ್ಲಿ ಮಾತ್ರ ಅನ್ವಯವಾಗುತ್ತದೆ). ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಕುಟುಂಬದ ಒಬ್ಬ ವ್ಯಕ್ತಿ ಸಂಬಂಧಪಟ್ಟ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದು, 3 ತಿಂಗಳು ಗತಿಸಿದಲ್ಲಿ ಈ ಯೋಜನೆಗೆ ಅರ್ಹರಾಗಿರುತ್ತಾರೆ. ನೋಂದಾಯಿತ ಸದಸ್ಯರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5 ಲಕ್ಷದವರೆಗೆ ನೆಟ್‍ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಯಾವ-ಯಾವ ಚಿಕಿತ್ಸೆಗಳು
- ಪ್ರಸ್ತುತ ಯಶಸ್ವಿನಿ ಯೋಜನೆಯಡಿಯಲ್ಲಿ ಟ್ರಸ್ಟ್ ಗುರುತಿಸಿದ 1650 ವಿವಿಧ ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳೂ ಸೇರಿದಂತೆ ಒಟ್ಟು 2128 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ.
- ರೋಗಿಗಳಿಗೆ ಸದರಿ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದಲ್ಲಿ ನೋಂದಾಯಿಸಿದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಒದಗಿಸಲಾಗುವುದು. ನೆಟ್‌ವರ್ಕ್ ಆಸ್ಪತ್ರೆಗಳನ್ನು ಹೊರತುಪಡಿಸಿ ಇತರೆ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯ ಸೇವೆ ಲಭ್ಯವಿರುವುದಿಲ್ಲ. ಯಶಸ್ವಿನಿ ಯೋಜನೆಯಡಿ ಫಲಾನುಭವಿ ಚಿಕಿತ್ಸೆ ಪಡೆಯುವ ಮೊದಲು ಆಸ್ಪತ್ರೆಯು ಯೋಜನೆಗೆ ಒಳಪಟ್ಟಿರುವ ಬಗ್ಗೆ ಖಾತರಿಪಡಿಸಿಕೊಂಡು ನಂತರ ಚಿಕಿತ್ಸೆ ಪಡೆಯತಕ್ಕದ್ದು.
- ಯೋಜನೆಯಲ್ಲಿ ಒಳಪಡದ ಚಿಕಿತ್ಸೆಗಳ ಮತ್ತು ಟ್ರಸ್ಟ್ ಅಂಗೀಕರಿಸದ ಆಸ್ಪತ್ರೆಗಳಲ್ಲಿ ಪಡೆದಂತಹ ಚಿಕಿತ್ಸೆಗಳಿಗೆ ಯಶಸ್ವಿನಿ ಟ್ರಸ್ಟ್ ಜವಾಬ್ದಾರರಾಗುವುದಿಲ್ಲ ಹಾಗೂ ಯಾವುದೇ ಕಾರಣಕ್ಕೂ ಆಸ್ಪತ್ರೆಗಳಿಗಾಗಲಿ ಅಥವಾ ಫಲಾನುಭವಿಗಳಿಗಾಗಲಿ ಚಿಕಿತ್ಸಾ ವೆಚ್ಚವನ್ನು ಪಾವತಿಸಲಾಗುವುದಿಲ್ಲ.
- ಎರಡು ಜೀವಂತ ಮಕ್ಕಳು ಅಥವಾ ಎರಡು ಹೆರಿಗೆಗೆ ಮಾತ್ರ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ದೊರೆಯುತ್ತದೆ.
- ಯಶಸ್ವಿನಿ ಯೋಜನೆಯ ಪ್ರೋಟೋಕಾಲ್ ಪ್ರಕಾರ ಯಶಸ್ವಿನಿ ಫಲಾನುಭವಿಗಳು ಜನರಲ್ ವಾರ್ಡನಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅರ್ಹರಿರುತ್ತಾರೆ. ಒಂದು ವೇಳೆ ಯೋಜನೆಯಡಿ ನಿಗದಿಪಡಿಸಿರುವ ಜನರಲ್ ವಾರ್ಡ್ ಬದಲಾಗಿ ಉನ್ನತ (Semi Special Ward Or Special Ward)ನಲ್ಲಿ ಚಿಕಿತ್ಸೆ ಪಡೆಯಲು ಇಚ್ಚಿಸಿದಲ್ಲಿ, ಸದರಿ ಫಲಾನುಭವಿಗಳಿಗೆ ಯೋಜನೆಯಡಿ ನಿಗದಿಪಡಿಸಿರುವಂತೆ ಜನರಲ್ ವಾರ್ಡಗೆ ಅನ್ವಯಿಸುವ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಭರಿಸಲಾಗುವುದು. ಉನ್ನತ ವಾರ್ಡ್/ ಸ್ಪೆಷಲ್ ವಾರ್ಡಿಗೆ ಆಗುವ ಹೆಚ್ಚುವರಿ ವ್ಯತ್ಯಾಸದ ಚಿಕಿತ್ಸಾ ಮೊತ್ತವನ್ನು ಸದರಿ ಫಲಾನುಭವಿಗಳೇ ಭರಿಸತಕ್ಕದ್ದು.
- ಯಶಸ್ವಿನಿ ಯೋಜನೆಯ ಪ್ಯಾಕೇಜಿನಲ್ಲಿ Implants ಅಗತ್ಯವಿರುವ ಕಡೆ Implants ದರವನ್ನು ಒಳಗೊಂಡಿರುತ್ತದೆ. (Ex. Knee replacement, Lens in cataract Surgery) ಒಂದು ವೇಳೆ ಫಲಾನುಭವಿಗಳು ಉನ್ನತ Implants ಅಥವಾ Lens ಪಡೆಯಲು ಸ್ವ-ಇಚ್ಛೆಯಿಂದ ಒಪ್ಪಿಗೆ ಸೂಚಿಸಿದ್ದಲ್ಲಿ, ಅಂತಹ ಉನ್ನತ Implants ಮತ್ತು Lens ಗೆ ತಗಲುವ ವ್ಯತ್ಯಾಸದ ಹೆಚ್ಚುವರಿ ಮೊತ್ತವನ್ನು ಅಂತ ಫಲಾನುಭವಿಗಳೇ ಭರಿಸಿ ಚಿಕಿತ್ಸೆಯನ್ನು ಪಡೆಯತಕ್ಕದ್ದು.
- ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ (OPD) ಗರಿಷ್ಠ ರೂ.200ಗಳನ್ನು (ಮೂರು ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ಈ ಪೈಕಿ ರೂ.100ಗಳನ್ನು ಯಶಸ್ವಿನಿ ಟ್ರಸ್ಟ್ ವತಿಯಿಂದ ಪಾವತಿಸಲಾಗುವುದು.

