ಬೆಂಗಳೂರು: ಸ್ಯಾಂಡಲ್‌ವುಡ್ ಅಂಗಳದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ ನಟ ಯಶ್, ಈಗ ‘ಟಾಕ್ಸಿಕ್’ (Toxic) ಸಿನಿಮಾ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಬಿಡುಗಡೆಯಾಗಿರುವ ಟೀಸರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು, ರಾಕಿ ಭಾಯ್ ಅವರ ಮುಂದಿನ ಪ್ಲ್ಯಾನ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಯಶ್ ಅವರ ಈ ಅಮೋಘ ಬೆಳವಣಿಗೆಯ ಬಗ್ಗೆ ಹಿರಿಯ ನಿರ್ಮಾಪಕ ಕೆ. ಮಂಜು ಅವರು ಮನಬಿಚ್ಚಿ ಮಾತನಾಡಿದ್ದು, ಯಶ್ ಅವರ ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಯಶ್ ಬಗ್ಗೆ ಕೆ. ಮಂಜು ಹೇಳಿದ್ದೇನು?
ನಿರ್ಮಾಪಕ ಕೆ. ಮಂಜು ಅವರು ಯಶ್ ಅವರ 40ನೇ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ, ಅವರ ಸಿನಿ ಜರ್ನಿ ಮತ್ತು ಭವಿಷ್ಯದ ಬಗ್ಗೆ ಮಹತ್ವದ ಮಾತುಗಳನ್ನಾಡಿದ್ದಾರೆ
ಯಶ್‌ಗೆ 2011-12ರ ಸಮಯದಲ್ಲೇ ‘ಗಜಕೇಸರಿ ಯೋಗ’ ಆರಂಭವಾಗಿದೆ. ಅದರ ಫಲವಾಗಿ ಇಂದು ಅವರು ಊಹೆಗೂ ನಿಲುಕದ ಎತ್ತರಕ್ಕೆ ಬೆಳೆದಿದ್ದಾರೆ. ಮುಂದಿನ 45 ವರ್ಷಗಳವರೆಗೆ ಅವರನ್ನು ಯಾರೂ ಮೀರಿಸಲು ಸಾಧ್ಯವಿಲ್ಲ, ಎಂದು ಭವಿಷ್ಯ ನುಡಿದಿದ್ದಾರೆ.
ಬಹಳಷ್ಟು ನಟರು ಯಶಸ್ಸು ಸಿಕ್ಕಾಗ ಹಾದಿ ತಪ್ಪುತ್ತಾರೆ, ಆದರೆ ಯಶ್ ಹಾಗಲ್ಲ ಎನ್ನುವುದು ಮಂಜು ಅವರ ಅಭಿಪ್ರಾಯ. ಯಶ್ ಮಾಡುವ ಪ್ಲ್ಯಾನ್‌ಗಳು ಬಹಳ ವಿಭಿನ್ನವಾಗಿರುತ್ತವೆ. ಅವರು ಯಾರ ಮನಸ್ಸನ್ನೂ ನೋಯಿಸುವುದಿಲ್ಲ. ಪ್ರತಿಯೊಂದು ಹೆಜ್ಜೆಯನ್ನು ಅಳೆದು ತೂಗಿ ಇಡುತ್ತಾರೆ. ಅವರ ವಿಷನ್ ತುಂಬಾ ದೊಡ್ಡದಿದೆ. ಯಶ್ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ ಎಂದರೆ ಅದಕ್ಕೆ ಅವರ ಕಠಿಣ ಪರಿಶ್ರಮ ಮತ್ತು ಪಕ್ಕಾ ಸ್ಕೆಚ್ ಕಾರಣ, ಎಂದು ಶ್ಲಾಘಿಸಿದ್ದಾರೆ.
ಯಶ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಕೇವಲ ಅವರಿಗಷ್ಟೇ ಅಲ್ಲ, ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವ ವಿಚಾರ. ಯಶ್‌ಗೆ ಕನ್ನಡ ಮತ್ತು ಕನ್ನಡ ಚಿತ್ರರಂಗ ಎಂದರೆ ಅತೀವ ಪ್ರೀತಿ. ಅವರು ಬೆಳೆದರೆ ನಮ್ಮ ಚಿತ್ರರಂಗ ಬೆಳೆದಂತೆ. ಟಾಕ್ಸಿಕ್ ಮೂಲಕ ಅವರು ಮತ್ತೊಂದು ಮೈಲಿಗಲ್ಲು ಸ್ಥಾಪಿಸುವುದು ಗ್ಯಾರಂಟಿ, ಎಂದು ಕೆ. ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
21 ಗಂಟೆಯಲ್ಲೇ 4.7 ಕೋಟಿ ವೀವ್ಸ್ ದಾಖಲಿಸಿದ ‘ಟಾಕ್ಸಿಕ್’ ಟೀಸರ್
ಕಿ ಭಾಯ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಕ್ರೇಜ್ ಹೇಗಿದೆ ಎಂದರೆ, ಟೀಸರ್ ಬಿಡುಗಡೆಯಾದ ಕೇವಲ 21 ಗಂಟೆಗಳಲ್ಲಿ ಬರೋಬ್ಬರಿ 47 ಮಿಲಿಯನ್ (4.7 ಕೋಟಿ) ವೀಕ್ಷಣೆಗಳನ್ನು ಪಡೆದುಕೊಂಡು ಯೂಟ್ಯೂಬ್‌ನಲ್ಲಿ ಅಬ್ಬರಿಸುತ್ತಿದೆ. ಸದ್ಯದ ಟ್ರೆಂಡ್ ನೋಡಿದರೆ ಮುಂದಿನ 4 ಗಂಟೆಗಳ ಒಳಗೆ ಈ ಟೀಸರ್ 5 ಕೋಟಿ ವೀಕ್ಷಣೆಗಳ ಮೈಲಿಗಲ್ಲು ತಲುಪುವುದು ಖಚಿತವಾಗಿದೆ.ಈ ಆಕ್ಷನ್ ಪ್ಯಾಕ್ಡ್ ಸಿನಿಮಾ ಮುಂದಿನ ವರ್ಷ ಮಾರ್ಚ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ.
ಟಾಕ್ಸಿಕ್ ಮೇಲೆ ಭಾರಿ ನಿರೀಕ್ಷೆ
‘ಟಾಕ್ಸಿಕ್’ ಸಿನಿಮಾದ ಟೀಸರ್ ನೋಡಿದವರಿಗೆ ಇದೊಂದು ಅಂತರಾಷ್ಟ್ರೀಯ ಗುಣಮಟ್ಟದ ಸಿನಿಮಾ ಎಂಬುದು ಖಾತ್ರಿಯಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಯಶ್ ಅವರನ್ನು ಹೊಸ ಆಯಾಮದಲ್ಲಿ ತೋರಿಸಲಿದ್ದು, ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ.
ಒಟ್ಟಿನಲ್ಲಿ, ಯಶ್ ಅವರ ಶ್ರಮ ಮತ್ತು ಕೆ. ಮಂಜು ಹೇಳಿದಂತೆ ಅವರ ‘ಯೋಗ’ ಎರಡೂ ಸೇರಿ ‘ಟಾಕ್ಸಿಕ್’ ಚಿತ್ರವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಕಾದು ನೋಡಬೇಕಿದೆ.

