ಯಾದಗಿರಿ: ಅಪ್ರಾಪ್ತ ಬಾಲಕಿಯ ಜೊತೆ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಫೋಕ್ಸೋ ಪ್ರಕರಣದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಯಾದಗಿರಿಯ ಮಹಲ್ ರೋಜಾ ಮಠದ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಈಗ ಏಕಾಏಕಿ ಪ್ರತ್ಯಕ್ಷರಾಗಿದ್ದಾರೆ.
ಫೆಬ್ರವರಿ 25ರಿಂದ ಕಾಣೆಯಾಗಿದ್ದ ಮಲ್ಲಿಕಾರ್ಜುನ ಮುತ್ಯಾ ಮಾರ್ಚ್ 4 ರಾತ್ರಿ ಶಹಾಪುರ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಗೆ ಹಾಜರಾಗಿದ್ದು, ಈ ವೇಳೆ ಪೊಲೀಸರು ವಿಚಾರಣೆ ನಡಸಿ ಇಂದು ಮಧ್ಯಾಹ್ನ 3 ಗಂಟೆಗೆ ಬರುವಂತೆ ಕಳುಹಿಸಿಕೊಟ್ಟಿದ್ದಾರೆ.ಈ ಹಿನ್ನೆಲೆಯಲಿ ಇಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಮುತ್ಯಾಗೆ ನೋಟಿಸ್ ನೀಡಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದು, ಅದರಂತೆ ಮುತ್ಯಾ ಹಾಜರಾದ ಬಳಿಕ ಮೆಡಿಕಲ್ ಟೆಸ್ಟ್ಗೆ ಒಳಪಡಿಸಲಾಗುತ್ತದೆ. ಬಳಿಕ ಪ್ರಕರಣದ ತನಿಖಾಧಿಕಾರಿ ಶಹಾಪುರ ಗ್ರಾಮೀಣ ಸರ್ಕಲ್ ಇನ್ಸ್ಪೆಕ್ಟರ್ ಶರಣಗೌಡ ನ್ಯಾಮಣ್ಣನವರ ನೇತೃತ್ವದಲ್ಲಿ ಮುತ್ಯಾ ಅವರನ್ನ ವಿಚಾರಣೆ ನಡೆಯಲಿದೆ. ಇನ್ನು ಒಂದು ವೇಳೆ ವಿಚಾರಣೆಗೆ ಸಹಕಾರ ನೀಡದಿದ್ದರೆ ಮುತ್ಯಾನನ್ನು ಬಂಧಿಸುವ ಸಾಧ್ಯತೆಗಳಿವೆ.
ಬಾಲಕಿಯ ಜೊತೆಗಿನ ಅನುಚಿತ ವರ್ತನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮುತ್ಯಾ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಈ ಪತ್ರದ ಬಳಿಕ ಫೆಬ್ರವರಿ 25ರಂದು ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮುತ್ಯಾ ನಾಪತ್ತೆಯಾಗಿದ್ದ.
ಇನ್ನೊಂದೆಡೆ, ಪ್ರಕರಣ ಸಂಬಂಧ ಮುತ್ಯಾ ಯಾದಗಿರಿ ಜಿಲ್ಲಾ ಕೋರ್ಟ್ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ಸರ್ಕಾರಿ ಪರ ವಕೀಲರು ಆಕ್ಷೇಪ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 6ಕ್ಕೆ ಮುಂದೂಡಿದೆ.

