ಬೆಂಗಳೂರು: ಪ್ರಸ್ತುತ ಇಡೀ ಜಗತ್ತನ್ನು ಕಾಡುತ್ತಿರುವ ಹವಾಮಾನ ವೈಪರೀತ್ಯದ (Climate Change) ಭೀಕರ ಸವಾಲುಗಳ ನಡುವೆ, ಇಂದು (ಜೂನ್ 5) ವಿಶ್ವಾದ್ಯಂತ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೆ ಪ್ರಕೃತಿಯೇ ಮೂಲ ಆಧಾರ. ಮಾನವ ಸೇರಿದಂತೆ ಇತರೆ ಪ್ರಾಣಿ, ಪಕ್ಷಿ ಹಾಗೂ ಪ್ರತಿಯೊಂದು ಜೀವ ಸಂಕುಲವು ತನ್ನ ಆಹಾರ, ಉಸಿರಾಡುವ ಗಾಳಿ, ಕುಡಿಯುವ ನೀರು ಸೇರಿದಂತೆ ಎಲ್ಲಾ ದೈನಂದಿನ ಅಗತ್ಯತೆಗಳಿಗಾಗಿ ಪರಿಸರವನ್ನೇ ಅವಲಂಭಿಸಿದೆ.
ಆದರೆ, ಇತ್ತೀಚಿನ ದಿನಗಳಲ್ಲಿ ಮನುಷ್ಯನು ತನ್ನ ದುರಾಸೆ, ಸ್ವಾರ್ಥ ಮತ್ತು ನಗರೀಕರಣದ ಹೆಸರಿನಲ್ಲಿ ತನಗೆ ಅರಿವಿಲ್ಲದಂತೆ ಪ್ರಕೃತಿಯನ್ನು ಭೀಕರವಾಗಿ ನಾಶ ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಇಂದು ನಾವು ಸೇವಿಸುವ ಗಾಳಿ, ಕುಡಿಯುವ ನೀರು ಮತ್ತು ಕೃಷಿ ಮಾಡುವ ಮಣ್ಣು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಮನುಷ್ಯನ ಈ ಆಧುನಿಕ ಬದುಕಿನ ಗೀಳಿಗೆ ಬ್ರೇಕ್ ಹಾಕಿ, ನಮ್ಮ ಭೂಮಿಯ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಇಡೀ ಮಾನವಕುಲದ ಸಾಮೂಹಿಕ ಜವಾಬ್ದಾರಿ ಎಂಬುದನ್ನು ನೆನಪಿಸಲು ಈ ದಿನ ಅತ್ಯಂತ ಮಹತ್ವದ್ದಾಗಿದೆ.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP – United Nations Environment Programme) ಈ ಜಾಗತಿಕ ಆಚರಣೆಯ ಹಿಂದಿನ ಪ್ರಮುಖ ಏಜೆನ್ಸಿಯಾಗಿದ್ದು, ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ಸವಾಲುಗಳನ್ನು ಎದುರಿಸಲು ಜನರಲ್ಲಿ ತುರ್ತು ಪ್ರಜ್ಞೆಯನ್ನು ಮೂಡಿಸುತ್ತಿದೆ.
2026ರ ವಿಶ್ವ ಪರಿಸರ ದಿನದ ವಿಶೇಷ ಧ್ಯೇಯವಾಕ್ಯ (Theme) ಏನು?
ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಜಾಗತಿಕವಾಗಿ ಒಂದು ವಿಭಿನ್ನ ಹಾಗೂ ವಿಶೇಷವಾದ ಧ್ಯೇಯವಾಕ್ಯದೊಂದಿಗೆ ಆಚರಿಸುತ್ತಾ ಬರಲಾಗಿದೆ. ಅದೇ ರೀತಿ, ಈ ವರ್ಷ ಅಂದರೆ 2026ರಲ್ಲಿ:
“ಪ್ರಕೃತಿಯಿಂದ ಪ್ರೇರಣೆ. ಪರಿಸರಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ.” (“Inspired by Nature. For Climate. For Our Future.”)
ಎಂಬ ಅರ್ಥಪೂರ್ಣ ಘೋಷವಾಕ್ಯದೊಂದಿಗೆ ಈ ಮಹತ್ವದ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಪ್ರಕೃತಿಯ ರಕ್ಷಣೆ ನಮ್ಮ ನಾಳಿನ ಭವಿಷ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಈ ಥೀಮ್ ಸಾರುತ್ತದೆ.
2026ರ ಆತಿಥೇಯ ದೇಶ ಯಾವುದು ಗೊತ್ತಾ?: ಬಾಕು ನಗರದಲ್ಲಿ ಜಾಗತಿಕ ಹಬ್ಬ
ಈ ವರ್ಷದ ವಿಶ್ವ ಪರಿಸರ ದಿನದ ಜಾಗತಿಕ ಆಚರಣೆಯನ್ನು ಆಯೋಜಿಸುವ ಹೆಮ್ಮೆಯ ಜವಾಬ್ದಾರಿಯನ್ನು ಅಜೆರ್ಬೈಜಾನ್ (Azerbaijan) ದೇಶ ಪಡೆದುಕೊಂಡಿದೆ. ಅದರ ರಾಜಧಾನಿ ಬಾಕು (Baku) ನಗರದಲ್ಲಿ ಈ ಭಾರಿ ಬೃಹತ್ ಜಾಗತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಜೆರ್ಬೈಜಾನ್ ದೇಶವು “ಪ್ರಕೃತಿಯಿಂದ ಪ್ರೇರಣೆ. ಪರಿಸರಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ.” (“Inspired by Nature. For Climate. For Our Future.”) ಎಂಬ ಘೋಷವಾಕ್ಯದೊಂದಿಗೆ ಹವಾಮಾನ ಬದಲಾವಣೆ ಮತ್ತು ಪರಿಸರ ವ್ಯವಸ್ಥೆಯ ನಾಶ ಎಂಬ ಎರಡು ದೊಡ್ಡ ಬಿಕ್ಕಟ್ಟುಗಳ ವಿರುದ್ಧ ಹೋರಾಡಲು ಸಜ್ಜಾಗಿದೆ. ಪ್ರಕೃತಿ ಎಂಬುದು ಕೇವಲ ಆಯ್ಕೆಯಲ್ಲ, ಅದು ನಮ್ಮ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಮತ್ತು ನಮ್ಮ ಸಾಮೂಹಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅತ್ಯಂತ ಕೇಂದ್ರಬಿಂದು ಎಂಬ ಬಲವಾದ ಸಂದೇಶವನ್ನು ಈ ದೇಶ ಸಾರುತ್ತಿದೆ.
ಜೂನ್ 5 ರಿಂದ ಜೂನ್ 16 ರವರೆಗೆ ಪರಿಸರ ಹಬ್ಬ ಇದರ ಇತಿಹಾಸವೇನು?
ವಿಶ್ವ ಪರಿಸರ ದಿನವು ಕೇವಲ ಒಂದು ದಿನಕ್ಕೆ ಸೀಮಿತವಾಗಿಲ್ಲ. ಇದರ ಆಚರಣೆಯ ಇತಿಹಾಸ ಮತ್ತು ಮಹತ್ವ ಹೀಗಿದೆ:
1972 ರ ಸ್ಟಾಕ್‌ಹೋಮ್ ಕಾನ್ಫರೆನ್ಸ್: ವಿಶ್ವಸಂಸ್ಥೆಯ ಸಭೆಯು 1972 ರಲ್ಲಿ ನಡೆದ ಐತಿಹಾಸಿಕ ಸ್ಟಾಕ್‌ಹೋಮ್ ಸಮ್ಮೇಳನದಲ್ಲಿ ಜೂನ್ 5 ಅನ್ನು ವಿಶ್ವ ಪರಿಸರ ದಿನ ಎಂದು ಘೋಷಿಸಿತು. ಪರಿಸರ ಸಂರಕ್ಷಣೆಯನ್ನು ಪ್ರಮುಖ ಜಾಗತಿಕ ಸಮಸ್ಯೆಯನ್ನಾಗಿ ಮಾಡಿದ ಮೊದಲ ವಿಶ್ವ ಸಮ್ಮೇಳನ ಇದಾಗಿದೆ. ಇದೇ ವರ್ಷ UNEP ಸಂಸ್ಥೆಯೂ ಸ್ಥಾಪನೆಯಾಯಿತು.
ಮೊದಲ ಆಚರಣೆ (1973/1974): ಪರಿಸರ ರಕ್ಷಣೆಯ ಕುರಿತು 1972 ರ ಚರ್ಚೆ ಮತ್ತು ವಿಶ್ವಸಂಸ್ಥೆಯ ಅನುಮೋದನೆಯೊಂದಿಗೆ ಜೂನ್ 5, 1973 ರಂದು ಮೊದಲ ಬಾರಿಗೆ “ಓನ್ಲಿ ಒನ್ ಅರ್ಥ್” (ಕೇವಲ ಒಂದೇ ಭೂಮಿ) ಎಂಬ ಥೀಮ್‌ನಡಿ ಆಚರಣೆ ಆರಂಭವಾಯಿತು. ತದನಂತರ 1974 ಜೂನ್ 5 ರಂದು ಅಧಿಕೃತವಾಗಿ ಮೊದಲ ಬೃಹತ್ ವಿಶ್ವ ಪರಿಸರ ದಿನವನ್ನು ಆಚರಿಸುತ್ತಾ ಬರಲಾಗಿದೆ.
11 ದಿನಗಳ ಪರಿಸರ ಜಾಗೃತಿ: ಜೂನ್ ತಿಂಗಳ 5ನೇ ತಾರೀಖಿನಿಂದ ಆರಂಭವಾಗಿ ಜೂನ್ 16ರ ವರೆಗೆ ಸತತವಾಗಿ ವಿಶ್ವ ಪರಿಸರ ದಿನದ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನಗಳಲ್ಲಿ ವಿಶ್ವಾದ್ಯಂತ ಕಾಡು ಬೆಳೆಸುವಿಕೆ, ಮರಗಳನ್ನು ನೆಡುವುದು ಸೇರಿದಂತೆ ಪ್ರಕೃತಿಯನ್ನು ಉಳಿಸುವ ಅನೇಕ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರಸ್ತುತ ಈ ದಿನವು ಸಾರ್ವಜನಿಕರನ್ನು ತಲುಪಲು ಒಂದು ಜಾಗತಿಕ ವೇದಿಕೆಯಾಗಿ ಬೆಳೆದಿದ್ದು, ಪ್ರತಿವರ್ಷ 143ಕ್ಕೂ ಹೆಚ್ಚು ದೇಶಗಳು ಸಕ್ರಿಯವಾಗಿ ಭಾಗಿಯಾಗುತ್ತವೆ.
ಪರಿಸರ ದಿನದ ಪ್ರಮುಖ ಉದ್ದೇಶಗಳೇನು?
ವಿಶ್ವ ಪರಿಸರ ದಿನವನ್ನು ಆಚರಿಸುವುದರ ಹಿಂದೆ ಕೆಲವು ಕಡಕ್ ಮತ್ತು ಮಹತ್ವದ ಉದ್ದೇಶಗಳಿವೆ:
ಸಾರ್ವಜನಿಕರಲ್ಲಿ ಜಾಗೃತಿ: ಪ್ರಕೃತಿ ಮಾಲಿನ್ಯ ಮತ್ತು ಗ್ಲೋಬಲ್ ವಾರ್ಮಿಂಗ್‌ನಂತಹ ಗಂಭೀರ ಸಮಸ್ಯೆಗಳ ಬಗ್ಗೆ ಪ್ರತಿಯೊಬ್ಬ ನಾಗರಿಕನಲ್ಲೂ ಅರಿವು ಮೂಡಿಸುವುದು.
ಪರಿಸರ ಸ್ನೇಹಿ ಅಭಿವೃದ್ಧಿ: ನಗರೀಕರಣದ ಹೆಸರಿನಲ್ಲಿ ಪ್ರಕೃತಿ ನಾಶ ಮಾಡುವುದನ್ನು ತಡೆದು, ಪರಿಸರ ಸ್ನೇಹಿ (Eco-friendly) ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅಭಿಯಾನಗಳನ್ನು ಆರಂಭಿಸುವುದು.
ಹಸಿರೀಕರಣಕ್ಕೆ ಪ್ರೇರಣೆ: ಬಂಜರು ಭೂಮಿಯಲ್ಲಿ ಗಿಡ, ಮರಗಳನ್ನು ಬೆಳೆಸುವಂತೆ ಮತ್ತು ಅರಣ್ಯ ನಾಶ ಮಾಡದಂತೆ ಜನರನ್ನು ಪ್ರೇರೇಪಿಸುವುದು.
ಜೀವ ಸಂಕುಲದ ರಕ್ಷಣೆ: ಕಲುಷಿತಗೊಳ್ಳುತ್ತಿರುವ ಗಾಳಿ, ನೀರು ಮತ್ತು ಮಣ್ಣನ್ನು ಸಂರಕ್ಷಿಸಿ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು.

