ಬೆಂಗಳೂರು: 2026- 27ನೇ ಶೈಕ್ಷಣಿಕ ಸಾಲಿಗೆ 10 ಹೊಸ ಎಂಜಿನಿಯರಿಂಗ್ ಕಾಲೇಜುಗಳು ಸೇರಿ ವಿವಿಧ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ಶಾಸ್ತ್ರ ಕೋರ್ಸ್ ಗಳಿಗೆ 1,59,151 ಸೀಟುಗಳು ಲಭ್ಯವಿವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ಕಾರಿ ಕೋಟಾದಡಿ 74,0 41, ಕಾಮೆಡ್ ಕೆ ಕೋಟಾದಡಿ 32,769, ಆಡಳಿತ ಮಂಡಳಿ ಕೋಟಾದಡಿ 51,294 ಸೀಟುಗಳಿವೆ. ಕಳೆದ ವರ್ಷಕ್ಕಿಂತ ಈ ಬಾರಿ 5235 ಸೀಟುಗಳು ಹೆಚ್ಚಾಗಿವೆ
2025- 26 ನೇ ಸಾಲಿನಲ್ಲಿ ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ 72,506 ಸೀಟುಗಳು ಸೇರಿ 1,53,916 ಸೀಟುಗಳು ಲಭ್ಯವಿದ್ದವು. ಈಗ ಸರ್ಕಾರಿ ಕಾಲೇಜುಗಳಲ್ಲಿ 500, ಖಾಸಗಿ ವಿವಿಗಳಲ್ಲಿ 2580, ಖಾಸಗಿ ಕಾಲೇಜುಗಳಲ್ಲಿ 1695, ಡೀಮ್ಡ್ ವಿವಿಗಳಲ್ಲಿ 60 ಸೀಟುಗಳು ಹೆಚ್ಚಳವಾಗಿವೆ.
ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಅನ್ವಯ ಕೆಲವು ಕಾಲೇಜುಗಳು, ಖಾಸಗಿ ವಿವಿಗಳು ಕೆಲವು ಕೋರ್ಸ್ ಗಳ ಸೀಟುಗಳನ್ನು ಪಟ್ಟಿಯಲ್ಲಿ ಸೇರಿಸಿಲ್ಲವೆಂದು ಹೇಳಲಾಗಿದೆ. ಯಾವುದೇ ಕೋರ್ಸ್ ನಲ್ಲಿ 180 ಕ್ಕಿಂತ ಹೆಚ್ಚಿನ ಪ್ರವೇಶ ಸಾಮರ್ಥ್ಯವಿದ್ದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಸೀಟು ಹೆಚ್ಚಳಕ್ಕೆ ಅನುಮತಿ ನೀಡಿದ್ದರೂ ರಾಷ್ಟ್ರೀಯ ಮಾನ್ಯತ ಮಂಡಳಿ ಪ್ರಮಾಣ ಪತ್ರ ನೀಡುವವರೆಗೆ ಪರಿಗಣಿಸುವುದಿಲ್ಲ.
ಕಂಪ್ಯೂಟರ್ ಸೈನ್ಸ್ ಹಾಗೂ ಅದಕ್ಕೆ ಸಂಬಂಧಿಸಿದ ಕೋರ್ಸ್ ಗಳಿಗೆ ಗರಿಷ್ಠ 900 ಸೀಟುಗಳ ಮಿತಿಯನ್ನು ಪರಿಗಣಿಸಲಾಗಿದೆ. ಈ ವರ್ಷ 900 ಸೀಟುಗಳ ಮಿತಿ ಮೀರಿ ಹೆಚ್ಚುವರಿ ಅನುಮೋದನೆ ಪಡೆದ ಕಾಲೇಜುಗಳ ಸೀಟುಗಳ ಪಟ್ಟಿಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ.

