ರಾಯಚೂರು: ರಾಯಚೂರು ವಿಜ್ಞಾನ ಕೇಂದ್ರದಲ್ಲಿ ಪ್ರೋಗ್ರಾಮ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಕೇಳಿ ಬಂದಿದೆ. ರಾಯಚೂರು ನಗರದ ಐಬಿ ರಸ್ತೆಯ ವಿದ್ಯಾ(30) ಮೃತಪಟ್ಟ ಮಹಿಳೆ. ಮೂರು ವರ್ಷದ ಹಿಂದೆ ಮಂಜುನಾಥ್ ಜತೆಗೆ ಮದುವೆಯಾಗಿದ್ದು ಮದುವೆಯಾದ ನಾಲ್ಕು ತಿಂಗಳಲ್ಲೇ ಪತಿ ಮಂಜುನಾಥ್ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಬಗ್ಗೆ ವಿದ್ಯಾ ಪೋಷಕರಿಗೆ ತಿಳಿಸಿದ್ದರು ಎನ್ನಲಾಗಿದೆ.
ವಿದ್ಯಾ ಅವರನ್ನು ಪತಿ ಮತ್ತು ಅತ್ತೆ ಸೇರಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಿಂಬಿಸಿದ್ದಾರೆ ಎಂದು ವಿದ್ಯಾ ತಂದೆ ಆರೋಪಿಸಿದ್ದಾರೆ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಶವಾಗಾರದ ಮುಂದೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. ತಹಶೀಲ್ದಾರ್ ಪರಶುರಾಮ್, ಡಿವೈಎಸ್ಪಿ ಶಾಂತವೀರ ಸೇರಿದಂತೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

