ಶಿವಮೊಗ್ಗ: ವಿಚ್ಛೇದನ ನಂತರ ತನ್ನ ನಂತರ ಪತಿಯ ಗೆಳೆಯನನ್ನು ಮಹಿಳೆ ಮದುವೆಯಾಗಿದ್ದಾಳೆ. ಇದರಿಂದ ರೊಚ್ಚಿಗೆದ್ದು ಸ್ನೇಹಿತನ ಮೇಲೆ ಪತಿ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದ ಮಲವಗೊಪ್ಪ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ.
ವಿನೋದ್ ಹಲ್ಲೆಗೊಳಗಾದವರು. ವಿಕ್ರಂ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಪತ್ನಿ ಛಾಯಾಗೆ ವಿಕ್ರಂ ವಿಚ್ಛೇದನ ನೀಡಿದ್ದ. ಹಲ್ಲೆಗೊಳಗಾದ ವಿನೋದ್ ಮತ್ತು ಆರೋಪಿ ವಿಕ್ರಂ ಇಬ್ಬರೂ ಸ್ನೇಹಿತರಾಗಿದ್ದರು. ವಿಚ್ಛೇದನ ನೀಡಿದ ನಂತರ ಪತ್ನಿಯನ್ನು ಸ್ನೇಹಿತನೇ ಮದುವೆಯಾದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದು ವಿನೋದ್ ಮೇಲೆ ಆರೋಪಿ ವಿಕ್ರಂ ಹಲ್ಲೆ ನಡೆಸಿದ್ದಾನೆ.
ಲಾರಿ ಚಾಲಕ ವಿನೋದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ವಿಕ್ರಂ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

