ಕಾರ್ಪೊರೇಟ್ ಜಗತ್ತಿನಲ್ಲಿ ಬರೋಬ್ಬರಿ 14 ವರ್ಷಗಳ ಅನುಭವ ಹೊಂದಿರುವ ಜೊಯಿತಾ ಎಂಬುವವರು ತಮ್ಮ ಉನ್ನತ ಹುದ್ದೆ ಮತ್ತು ಲಕ್ಷಾಂತರ ರೂಪಾಯಿ ಸಂಬಳವನ್ನು ತೊರೆದು ಹೊರಬಂದಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ವೇತನವನ್ನು ಅವರು ‘ಚಿನ್ನದ ಪಂಜರ’ (Golden Cage) ಎಂದು ಬಣ್ಣಿಸಿದ್ದು, ನೆಟ್ಟಿಗರು ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಲೈಫ್ ಸ್ಟೈಲ್ ಇನ್ ಫ್ಲೇಷನ್ ಎಂಬ ಸುಳಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಈ ಬಗ್ಗೆ ಹಂಚಿಕೊಂಡಿರುವ ಜೊಯಿತಾ, “ತಿಂಗಳಿಗೆ 5 ಲಕ್ಷ ರೂಪಾಯಿ ಸಂಬಳ ನನಗೆ ಬೇಡದ ಜೀವನಶೈಲಿಯನ್ನು ತಂದುಕೊಟ್ಟಿತ್ತು. ದುಬಾರಿ ಹೋಟೆಲ್ಗಳ ಊಟ, ವಿದೇಶಿ ಪ್ರವಾಸಗಳು ಕೈಗೆಟುಕುತ್ತಿದ್ದವು ನಿಜ. ಆದರೆ ಇದರ ಜೊತೆಗೆ ಪ್ರತಿ ಕ್ಷಣವೂ ಕೆಲಸಕ್ಕೆ ಲಭ್ಯವಿರಬೇಕಾದ ಅನಿವಾರ್ಯತೆ ಇತ್ತು. ಇದು ನನ್ನನ್ನು ನನ್ನ ಕುಟುಂಬದಿಂದ, ನನ್ನ ಮಗುವಿನಿಂದ ಮತ್ತು ನನ್ನಿಂದಲೇ ದೂರ ಮಾಡಿತ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಂಬಳ ಬಂದಂತೆಲ್ಲಾ ಮನುಷ್ಯ ಅಷ್ಟೇ ದೊಡ್ಡ ಮಟ್ಟದ ಖರ್ಚುಗಳಿಗೆ ಒಡ್ಡಿಕೊಳ್ಳುತ್ತಾನೆ. ಇದನ್ನು ಅವರು ‘ಲೈಫ್ ಸ್ಟೈಲ್ ಇನ್ ಫ್ಲೇಷನ್’ ಎಂದು ಕರೆದಿದ್ದಾರೆ. ಈ ಅದ್ದೂರಿ ಜೀವನವೇ ಒಂದು ಬಲೆಯನ್ನು ಹೆಣೆದು ನಮ್ಮನ್ನು ಆ ಕೆಲಸಕ್ಕೆ ಕಟ್ಟಿಹಾಕುತ್ತದೆ. ನಾವು ಸ್ಟೇಟಸ್ ಖರೀದಿಸುತ್ತಿದ್ದೇವೆ ಎಂದುಕೊಳ್ಳುತ್ತೇವೆ, ಆದರೆ ವಾಸ್ತವದಲ್ಲಿ ನಮ್ಮನ್ನು ದಹಿಸುವ ವಿಷಯದ ಮೇಲೆ ನಾವು ಅವಲಂಬಿತರಾಗುತ್ತೇವೆ ಎಂದು ಅವರು ವಿವರಿಸಿದ್ದಾರೆ.
ಸಾಲ ಮುಕ್ತ ಜೀವನದತ್ತ ಹೆಜ್ಜೆ ಈ ಕೆಲಸವನ್ನು ಬಿಡುವ ಮೊದಲು ಜೊಯಿತಾ ಅವರು ಒಂದು ಮುಖ್ಯ ನಿರ್ಧಾರ ತಳೆದಿದ್ದರು. ಯಾವುದೇ ಇಎಂಐ (EMI) ಬಾಕಿ ಇಲ್ಲದಂತೆ ನೋಡಿಕೊಂಡ ನಂತರವೇ ಅವರು ರಿಸೈನ್ ಮಾಡಿದ್ದಾರೆ. ಸದ್ಯ ಅವರು ಫ್ರಾಕ್ಷನಲ್ ಸಿಎಂಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪೂರ್ಣಾವಧಿ ಕೆಲಸದ ಬದಲು ಕೆಲವು ಪ್ರಾಜೆಕ್ಟ್ಗಳನ್ನು ಮಾತ್ರ ಆಯ್ದುಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಅವರಿಗೆ ಮಾನಸಿಕ ನೆಮ್ಮದಿ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಇವರ ಧೈರ್ಯವನ್ನು ಮೆಚ್ಚಿದರೆ, ಇನ್ನು ಕೆಲವರು ಉದ್ಯೋಗದ ಹಂತಕ್ಕೆ ತಕ್ಕಂತೆ ಆದ್ಯತೆಗಳು ಬದಲಾಗುತ್ತವೆ ಎಂದು ವಾದಿಸಿದ್ದಾರೆ. ಒಟ್ಟಾರೆಯಾಗಿ, ದುಡ್ಡೇ ದೊಡ್ಡಪ್ಪ ಎನ್ನುವ ಕಾಲದಲ್ಲಿ ನೆಮ್ಮದಿಯೇ ಮುಖ್ಯ ಎಂದು ಸಾರುವ ಜೊಯಿತಾ ಅವರ ನಿರ್ಧಾರ ಈಗ ಕಾರ್ಪೊರೇಟ್ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

