ಲಖನೌ: ಮದುವೆ ಮೆರವಣಿಗೆಯ ಡಿಜೆ ಸೌಂಡ್ ಗೆ ಕೋಳಿಗಳು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದು, ಕೋಳಿ ಫಾರಂ ಮಾಲೀಕ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ನಡೆದಿದೆ.
ಮದುವೆ ಮೆರವಣಿಗೆಯಲ್ಲಿ ಕಿವಿಗಡಚಿಕ್ಕುವ ಡಿಜೆ ಸೌಂಡ್ ಹಾಕಲಾಗಿತ್ತು. ಈ ಸದ್ದಿಗೆ ಕೋಳಿಗಳು ಸಾವನ್ನಪ್ಪಿವೆ ಎಂದು ಫಾರಂ ಮಾಲೀಕ ಸಬರ್ ಅಲಿ ಆರೋಪಿಸಿದ್ದಾರೆ.
ಕುದ್ವಾರ ಪ್ರದೇಶದ ರಾಮ್ ಭದ್ರ ಪೂರ್ವದಿಂದ ಬಂದ ಬಬ್ಬನ್ ವಿಶ್ವಕರ್ಮ ಅವರ ಮಗಳ ವಿವಾಹದ ಮೆರವಣಿಗೆ ಸಬೀರ್ ಅಲಿ ಅವರ ಕೋಳಿ ಸಾಕಣೆ ಕೇಂದ್ರದ ಮೂಲಕ ಸಾಗಿತ್ತು. ರಾತ್ರಿ 9:30 ರ ಸುಮಾರಿಗೆ ಡಿಜೆಯಲ್ಲಿ ನುಡಿಸಲಾದ ಹೆಚ್ಚಿನ ಡೆಸಿಬಲ್ ಶಬ್ದವು ಕೋಳಿಗಳಲ್ಲಿ ತೀವ್ರ ಭಯವನ್ನುಂಟುಮಾಡಿತು. ಈ ತೀವ್ರ ಶಬ್ದವನ್ನು ತಡೆದುಕೊಳ್ಳಲಾರದೆ ಸಬೀರ್ ಅಲಿ ಅವರ ಫಾರಂನಲ್ಲಿದ್ದ 140 ಕೋಳಿಗಳು ಮೃತಪಟ್ಟಿವೆ.
ಸಬೀರ್ ಅಲಿ ಅವರು ನೀಡಿದ ದೂರಿನ ಮೇರೆಗೆ, ಪೊಲೀಸರು ಮಂಗಳವಾರ ರಾತ್ರಿ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂಗೀತ ವ್ಯವಸ್ಥೆಯು ಅನುಮತಿಸಲಾದ ಶಬ್ದ ಮಿತಿಗಳನ್ನು ಮೀರಿತ್ತೇ? ಮತ್ತು ಕೋಳಿಗಳ ಸಾವಿಗೆ ಈ ಶಬ್ದದ ಮಟ್ಟವೇ ನೇರ ಕಾರಣವೇ? ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ತಜ್ಞರ ಪ್ರಕಾರ, ತೀವ್ರಮಟ್ಟದ ಧ್ವನಿ ತರಂಗಗಳು ಪಕ್ಷಿಗಳು ಮತ್ತು ಪ್ರಾಣಿಗಳಲ್ಲಿ ತೀವ್ರ ಒತ್ತಡದ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಇದು ಕೆಲವೊಮ್ಮೆ ಅವುಗಳಲ್ಲಿ ಹೃದಯ ಸ್ತಂಭನಕ್ಕೂ ಕಾರಣವಾಗಬಹುದು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾದಂತಿದೆ. ಶಬ್ದ ಎಷ್ಟು ತೀವ್ರವಾಗಿತ್ತೆಂದರೆ ಕೋಳಿಗಳು ಭಯಗೊಂಡು ಸತ್ತಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಮೇರೆಗೆ ಪೊಲೀಸರು ಪಾರ್ಸಿಪುರದ ಡಿಜೆ ಆಪರೇಟರ್ ಕವಿ ಯಾದವ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ.

