ಹೈದರಾಬಾದ್: ಸಂಭ್ರಮದ ಮನೆಯಲ್ಲಿ ನಗುನಗುತ್ತಾ ಫೋಟೋಗೆ ಫೋಸ್ ನೀಡುತ್ತಿದ್ದ ಮಹಿಳೆಯೊಬ್ಬರು ಕ್ಷಣಾರ್ಧದಲ್ಲಿ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಸೋಮವಾರ (ಮಾರ್ಚ್ 16) ನಡೆದಿದೆ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಂಭವಿಸಿದ ಈ ಸಾವು ನೆರೆದಿದ್ದವರನ್ನು ದಿಗ್ಭ್ರಮೆಗೊಳಿಸಿದೆ.
ನಡೆದದ್ದೇನು?
ಮೃತ ಮಹಿಳೆಯನ್ನು ಖಮ್ಮಂನ ಗಾಂಧಿ ಚೌಕ್ ನಿವಾಸಿ ಸುಶ್ಮಿತಾ (44) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಅವರು ತಮ್ಮ ಸಂಬಂಧಿಕರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದರು. ಸಂಭ್ರಮದ ವಾತಾವರಣದಲ್ಲಿ ಸಂಬಂಧಿಕರ ಜೊತೆ ಸೇರಿ ಫೋಟೋಗೆ ಫೋಸ್ ನೀಡಲು ಸಿದ್ಧರಾಗುತ್ತಿದ್ದರು.
ವೈರಲ್ ಆಗಿರುವ ವಿಡಿಯೋದಲ್ಲಿ, ಸುಶ್ಮಿತಾ ಅವರು ನಗುನಗುತ್ತಾ ತಮ್ಮ ಸಂಬಂಧಿಕರನ್ನು ತಬ್ಬಿಕೊಂಡು ಫೋಟೋಗೆ ನಿಂತಿರುವುದು ಕಂಡುಬರುತ್ತದೆ. ಆದರೆ, ಮುಂದಿನ ಸೆಕೆಂಡಿನಲ್ಲೇ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಹೃದಯಾಘಾತವೇ ಈ ಸಾವಿಗೆ ಕಾರಣ ಎನ್ನಲಾಗಿದೆ.
ಜಿಮ್‌ನಲ್ಲೂ ಮಗದೊಂದು ಸಾವು
ಇದೇ ರೀತಿಯ ಮತ್ತೊಂದು ಘಟನೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ನಡೆದಿದೆ. 53 ವರ್ಷದ ವ್ಯಕ್ತಿಯೊಬ್ಬರು ಜಿಮ್‌ನಲ್ಲಿ ವರ್ಕೌಟ್ ಮುಗಿಸಿ ವಾಶ್‌ರೂಮ್‌ಗೆ ಹೋದಾಗ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಜಿಮ್ ಸಿಬ್ಬಂದಿ ಗಮನಿಸಿ ಆಸ್ಪತ್ರೆಗೆ ಸಾಗಿಸಿದರಾದರೂ, ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಪದೇ ಪದೇ ಸಂಭವಿಸುತ್ತಿರುವ ದಿಢೀರ್ ಹೃದಯಾಘಾತಗಳು
ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಮಧ್ಯವಯಸ್ಕರಲ್ಲಿ ಇಂತಹ ‘ಸಡನ್ ಕಾರ್ಡಿಯಾಕ್ ಅರೆಸ್ಟ್’ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ನಗುತ್ತಿರುವಾಗ, ಡಾನ್ಸ್ ಮಾಡುವಾಗ ಅಥವಾ ದೈನಂದಿನ ಕೆಲಸಗಳ ನಡುವೆಯೇ ಜೀವ ಪಕ್ಷಿ ಹಾರಿಹೋಗುತ್ತಿರುವ ಘಟನೆಗಳು ಹೆಚ್ಚುತ್ತಿವೆ.

