ಆಗ್ರಾ: ಪ್ರಿಯತಮನ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಹತ್ಯೆಗೈದು, ಬಳಿಕ ಶವವನ್ನು ಸುಟ್ತು ಹಾಕಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಏಪ್ರಿಲ್ 1 ರ ರಾತ್ರಿ ಆಗ್ರಾದ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು, ಸ್ಥಳೀಯರು ಇದನ್ನು ಕಂಡು ಆತಂಕಗೊಂಡಿದ್ದರು. ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದರಿಂದ ಶವವನ್ನು ಗುರುತಿಸುವುದು ಸವಾಲಾಗಿತ್ತು, ಆದರೆ ಮುಂಗೈ ಮೇಲಿನ ಹಚ್ಚೆ ಉಳಿದುಕೊಂಡಿತ್ತು. ಹಚ್ಚೆ ಮೂಲಕವಾಗಿ ಶವದ ಗುರುತು ಪತ್ತೆಯಾಗಿದ್ದು, ಲೋಕೇಂದ್ರ ಎಂಬಾತನ ಶವ ಎಂದು ತಿಳಿದುಬಂದಿತ್ತು.
ಇದೇ ವೇಳೆ ಲೋಕೇಂದ್ರ ಅವರ ಸಹೋದರ ಪೊಲೀಸರಿಗೆ ನಾಪತ್ತೆಯಾದ ದೂರು ದಾಖಲಿಸಿದ್ದರು, ಲೋಕೇಂದ್ರ ರಾತ್ರಿ ಮನೆಗೆ ಹಿಂತಿರುಗಲಿಲ್ಲ ಮತ್ತು ಕೊನೆಯ ಬಾರಿಗೆ ಮಹೇಶ್ ಪ್ರಜಾಪತಿಯೊಂದಿಗೆ ಕಾಣಿಸಿಕೊಂಡಿದ್ದರು ಎಂದು ದೂರಿನಲ್ಲಿ ದಾಖಲಿಸಲಾಗಿತ್ತು. ಪ್ರಕರಣವನ್ನು ಭೇದಿಸಲು ಪೊಲೀಸರು ಐದು ತಂಡಗಳನ್ನು ರಚಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಅಪರಾಧದ ಸ್ಥಳದ ಬಳಿ ಪೊಲೀಸರು ಮದ್ಯದ ಬಾಟಲಿಗಳು ಮತ್ತು ಕೆಲವು ಕಾಗದದ ಚೂರುಗಳನ್ನು ವಶಪಡಿಸಿಕೊಂಡಿದ್ದರು. ಅದರಲ್ಲಿ ಕೆಲವು ಪುರಾವೆಗಳು ದೊರೆತ ಬಳಿಕ ಲೋಕೇಂದ್ರನ ಪತ್ನಿ ಆಕೆಯ ಪ್ರಿಯಕರ ಮಹೇಶ್ ಪ್ರಜಾಪತಿ ಮತ್ತು ಆತನ ಸ್ನೇಹಿತ ಧರ್ಮವೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಲೋಕೇಂದ್ರನ ಪತ್ನಿಯೊಂದಿಗೆ ತಾನು ಬಹಳ ದಿನಗಳಿಂದ ಸಂಬಂಧ ಹೊಂದಿದ್ದಾಗಿ ಮಹೇಶ್ ಪೊಲೀಸರಿಗೆ ತಿಳಿಸಿದ್ದಾನೆ. ಇತ್ತೀಚೆಗೆ, ಲೋಕೇಂದ್ರನಿಗೆ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಗೊತ್ತಾಗಿದೆ. ಇದಕ್ಕೆ ಪತ್ನಿಗೆ ಬುದ್ಧಿಹೇಳಿದ್ದ. ಇದಾದ ಬಳಿಕ ಇಬ್ಬರೂ ಲೋಕೇಂದ್ರನ ಕೊಲೆಗೆ ಸಂಚು ರೂಪಿಸಿದ್ದರು.
ಲೋಕೇಂದ್ರ ಮನೆಯಿಂದ ಹೊರಟುಹೋದಾಗ, ಅವರ ಪತ್ನಿ ಮಹೇಶ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಳು. ದಾರಿಯಲ್ಲಿ ಮಹೇಶ್ ಲೋಕೇಂದ್ರನನ್ನು ಭೇಟಿಯಾಗಿ ಕರೆದೊಯ್ದಿದ್ದ. ಧರ್ಮವೀರ್ ಕೂಡ ಅವರೊಂದಿಗೆ ಸೇರಿಕೊಂಡಿದ್ದ. ಅವರು ಮದ್ಯ ಮತ್ತು ಊಟವನ್ನು ತೆಗೆದುಕೊಂಡು ಹೋಗಿ ಹೊಲದಲ್ಲಿ ಕುಡಿಯಲು ಪ್ರಾರಂಭಿಸಿದ್ದರು. ಮಹೇಶ್ ಮತ್ತು ಧರ್ಮವೀರ್ ಲೋಕೇಂದ್ರನನ್ನು ಉಸಿರುಗಟ್ಟಿಸಿದ್ದರು, ಲೋಕೇಂದ್ರ ಪ್ರಜ್ಞೆ ತಪ್ಪಿ ಬಿದ್ದಿದ್ದ. ನಂತರ ಅವರು ಲೋಕೇಂದ್ರನ ದೇಹದ ಮೇಲೆ ಪೆಟ್ರೋಲ್ ಸುರಿದು, ಗೋಧಿಯ ಮೂಟೆಗಳಿಂದ ಮುಚ್ಚಿ ಬೆಂಕಿ ಹಚ್ಚಿದ್ದರು ಎಂದು ಮಹೇಶ್ ಬಾಯ್ಬಿಟ್ಟಿದ್ದಾನೆ.

