ಬೆಂಗಳೂರು: ಮದುವೆಯಾಗಿ ಮೂರು ತಿಂಗಳಿಗೆ ಪತ್ನಿ ತವರು ಸೇರಿದ್ದರಿಂದ ಕೋಪಗೊಂಡ ಅಳಿಯ ಅತ್ತೆ, ಮಾವನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೈಯದ್ ಅಹಮದ್(55), ಫರಿನಾ ಬಾನು(48) ಹಲ್ಲೆಗೊಳಗಾದವರು. ಅಳಿಯ ಫರ್ಹಾನ್ ಮುಬಾರಕ್ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ, 15ಕ್ಕೂ ಹೆಚ್ಚು ಬಾರಿ ಮಚ್ಚಿನಿಂದ ಅತ್ತೆ, ಮಾವನ ಮೇಲೆ ಹಲ್ಲೆ ಮಾಡಿದ್ದಾನೆ.ಅತ್ತೆ ಹಾಗೂ ಮಾವನ ತಲೆ, ಭುಜ, ಕೈಕಾಲು ಸೇರಿದಂತೆ ಹಲವೆಡೆ ಗಾಯಗಳಾಗಿವೆ, ಬಕ್ರಿದ್ ಹಬ್ಬದ ದಿನ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಫರ್ಹಾನ್ ಮುಬಾರಕ್ 5 ವರ್ಷದ ಹಿಂದೆ ಸೈಯದ್ ಅಹಮದ್ ಅವರ ಪುತ್ರಿಯ ಜೊತೆ ಮದುವೆಯಾಗಿದ್ದ. ಮದುವೆಯಾದ ಮೂರು ತಿಂಗಳಿಗೆ ಜೋಡಿ ಬೇರೆಯಾಗಿದ್ದರು. ನಾಲ್ಕು ತಿಂಗಳ ಹಿಂದೆ ವಿಚ್ಛೇದನಕ್ಕೆ ಪತ್ನಿ ಅರ್ಜಿ ಸಲ್ಲಿಸಿದ್ದು, ಆಕ್ರೋಶಗೊಂಡ ಪತಿ ಫರ್ಹಾನ್ ಮುಬಾರಕ್ ಪತ್ನಿಯ ಮೇಲೆ ದಾಳಿ ಮಾಡಲು ಮಚ್ಚು ಸಮೇತ ಬಂದಿದ್ದಾನೆ. ಆಕೆ ಮನೆಯಲ್ಲಿ ಇಲ್ಲದ ಕಾರಣ ಅತ್ತೆ, ಮಾವನ ಮೇಲೆ ದಾಳಿ ನಡೆಸಿದ್ದಾನೆ. ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

