ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರ್ಮುಜ್ ಜಲಸಂಧಿ ವಿಚಾರದಲ್ಲಿ ಮಿತ್ರರಾಷ್ಟ್ರಗಳ ಸಹಾಯವನ್ನು ಕೇಳಿದ್ದಾರೆ. ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಹೊರ್ಮುಜ್ ಜಲಸಂಧಿ ಬಳಿ ಯುದ್ಧನೌಕೆ ರವಾನಿಸಿದರೆ ಸಂಘರ್ಷ ತೀವ್ರಗೊಳ್ಳಲಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇದು ಡೊನಾಲ್ಡ್ ಟ್ರಂಪ್‌ಗೆ ಸವಾಲಿನ ಪ್ರಶ್ನೆಯಾಗಿದೆ.
ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿತ್ರರಾಷ್ಟ್ರಗಳ ಸಹಾಯವನ್ನು ಕೋರಿದ್ದಾರೆ. ಅವರು ಒಂದು ಒಕ್ಕೂಟವನ್ನು ರಚಿಸಿದರೂ ಸಹ, ಇರಾನ್ ಹೇರಿರುವ ದಿಗ್ಬಂಧನವನ್ನು ಅಂತ್ಯಗೊಳಿಸುವುದು ಬಹಳ ಕಷ್ಟಕರವೆಂದು ಸಾಬೀತಾಗುತ್ತಿದೆ.
ಇರಾನ್ ಈ ಕಿರಿದಾದ ಜಲಸಂಧಿಯ ವಿಶ್ವದ ವ್ಯಾಪಾರ ವಹಿವಾಟಿನ ಮೇಲೆ ಭಾರೀ ಪ್ರಭಾವವನ್ನು ಬೀರಿದೆ. ಅಮೆರಿಕ-ಇಸ್ರೇಲ್ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಡ್ರೋನ್‍ಗಳು, ಕ್ಷಿಪಣಿಗಳು ಮತ್ತು ಮೈನ್‌ಗಳನ್ನು ಬಳಸುವ ಮೂಲಕ ಈ ಪ್ರಮುಖ ಜಲಮಾರ್ಗವನ್ನು ಅಸುರಕ್ಷಿತಗೊಳಿಸಿದೆ, ಇಲ್ಲಿಂದ ಹಡಗುಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ.
ಜಲಸಂಧಿಯನ್ನು ಈಗ ಏಕೆ ಬಂದ್ ಮಾಡಲಾಗುತ್ತಿದೆ?. ಜಲಸಂಧಿಯನ್ನು ಬಂದ್ ಮಾಡುವುದು ನೀರು ಕುಡಿದಷ್ಟು ಸುಲಭ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕಮಾಂಡರ್ 2011ರಲ್ಲಿ ಎಚ್ಚರಿಕೆ ನೀಡಿದ್ದನ್ನು ಇಂದು ನೆನಪು ಮಾಡಿಕೊಳ್ಳಬೇಕಿದೆ.
ಜಲಸಂಧಿಯನ್ನು ಮುಚ್ಚುವ ಬೆದರಿಕೆಯನ್ನು ಈ ಹಿಂದೆಯೂ ಹಲವು ಬಾರಿ ಹಾಕಲಾಗಿತ್ತು. ಈ ಕ್ರಮ ಇಂಧನ ವಲಯದ ಮೇಲೆ ಪ್ರತೀಕಾರದ ದಾಳಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ವಿಶ್ಲೇಷಕರು ಯಾವಾಗಲೂ ಜಲಸಂಧಿಯ ಮುಚ್ಚುವಿಕೆಯನ್ನು ಅಂತಿಮ ಹಂತದ ಕ್ರಮವೆಂದೇ ಪರಿಗಣಿಸುತ್ತಿದ್ದರು.
ಆದರೆ ಈ ಬಾರಿ ಇರಾನ್‌ನ ಪರಮೋಚ್ಚ ನಾಯಕ ಖಮೇನಿ ಹತ್ಯೆಯ ಬಳಿಕ ಜಲಸಂಧಿ ಬಂದ್ ಮಾಡಿರುವುದು ಇರಾನ್ ಅಸ್ತಿತ್ವದ ಹೋರಾಟದ ಪ್ರಶ್ನೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಜಲಸಂಧಿ ಮೂಲಕ ಹಡಗುಗಳ ಸಂಚಾರಕ್ಕೆ ಅಮೆರಿಕ ಪ್ರಯತ್ನ ಮಾಡುತ್ತಲೇ ಇದೆ, ಇದಕ್ಕಾಗಿಯೇ ವಿವಿಧ ರಾಷ್ಟ್ರಗಳ ಸಹಾಯ ಕೇಳಿದೆ.
ಹೋರ್ಮುಜ್ ಜಲಸಂಧಿ: ಹೋರ್ಮುಜ್ ಜಲಸಂಧಿ ಇರಾನ್ ಮತ್ತು ಓಮನ್ ನಡುವಿನ ಅತ್ಯಂತ ಕಿರಿದಾದ ಜಲಮಾರ್ಗ. ಇದು ಸುಮಾರು 33 ಕಿ.ಮೀ.ಅಗಲವಾಗಿದೆ ಎಂದು ಅಂದಾಜಿಸಲಾಗಿದ್ದು, ಹಡಗುಗಳ ಸಂಚಾರಕ್ಕೆ ಲಭ್ಯವಿರುವ ಹಾದಿಗಳು ಕೇವಲ ಎರಡು ನಾಟಿಕಲ್ ಮೈಲಿಗಳಷ್ಟು ವಿಸ್ತಾರವಾಗಿವೆ. ಎಸ್‌ಎಸ್‌ವೈ ಗ್ಲೋಬಲ್ ಪ್ರಕಾರ, ಹಡಗುಗಳು ಇರಾನಿನ ದ್ವೀಪಗಳು ಮತ್ತು ಬೆಟ್ಟಗುಡ್ಡಗಳಿಂದ ಕೂಡಿದ ಕರಾವಳಿಯ ಎದುರಲ್ಲೇ ತಿರುವು ಪಡೆಯಬೇಕಾಗುತ್ತದೆ. ಇದು ಇರಾನಿನ ಸೇನೆಗೆ ಅಡಗಿಕೊಂಡು ದಾಳಿ ಮಾಡಲು ಅನುಕೂಲಕರವಾದ ಸ್ಥಳವಾಗಿದೆ.
ಇರಾನ್‌ನ ಸಾಂಪ್ರದಾಯಿಕ ನೌಕಾಪಡೆಯು ಬಹುತೇಕ ನಾಶವಾಗಿದ್ದರೂ ಸಹ ಐಆರ್‌ಜಿಸಿ ಬಳಿ ವೇಗವಾಗಿ ದಾಳಿ ಮಾಡುವ ನೌಕೆಗಳು, ಕಿರು ಜಲಾಂತರ್ಗಾಮಿಗಳು, ಮೈನ್‌ಗಳು ಮತ್ತು ಸ್ಫೋಟಕಗಳನ್ನು ತುಂಬಿದ ಜೆಟ್ ಸ್ಕೀಗಳೂ ಸೇರಿದಂತೆ ಹತ್ತು ಹಲವು ಆಯ್ಕೆಗಳಿವೆ. ಸೆಂಟರ್ ಫಾರ್ ಇನ್ಫರ್ಮೇಷನ್ ರೆಸಿಲಿಯನ್ಸ್ ಪ್ರಕಾರ ಟೆಹ್ರಾನ್ ತಿಂಗಳಿಗೆ ಸುಮಾರು 10,000 ಡ್ರೋನ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಕಿರಿದಾದ ಜಲಸಂಧಿ ಮೂಲಕ ವಾಯುಪಡೆಯ ರಕ್ಷಣೆಯನ್ನು ನೀಡಿ ಹಡಗುಗಳ ಸಂಚರ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ತೇಲುವ ಮೈನ್‌ಗಳನ್ನು ನಿಯೋಜಿಸುವ ಸಾಮರ್ಥ್ಯವನ್ನು ನಾಶಪಡಿಸಿದರೂ ಸಹ, ಹಡಗುಗಳು ಆತ್ಮಹತ್ಯಾ ದಾಳಿಗಳ ಭೀತಿಯನ್ನು ಎದುರಿಸಬೇಕಾಗುತ್ತದೆ ಎಂದು ಯುರೋಪಿಯನ್ ಇನ್‌ಸ್ಟಿಟ್ಯೂಟ್ ಫಾರ್ ಮಿಡಲ್ ಈಸ್ಟ್ ಅಂಡ್ ನಾರ್ತ್ ಆಫ್ರಿಕನ್ ಸ್ಟಡೀಸ್ ನಿರ್ದೇಶಕ ಆದಿಲ್ ಬಕವಾನ್ ಹೇಳಿದ್ದಾರೆ.
ಜಲಸಂಧಿಯನ್ನು ವಶಕ್ಕೆ ಪಡೆಯಲುಅನೇಕ ದೇಶಗಳು ಯುದ್ಧನೌಕೆಗಳನ್ನು ಕಳುಹಿಸುತ್ತವೆ ಎಂದು ತಾನು ನಿರೀಕ್ಷಿಸುವುದಾಗಿ ಟ್ರಂಪ್ ಭಾನುವಾರ ಹೇಳಿದ್ದರು. ತಾವು 7 ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಹಡಗು ಕಂಪನಿಗಳಿಗೆ ವಿಮೆ ಮತ್ತು ಗ್ಯಾರಂಟಿಗಳನ್ನು ಒದಗಿಸಲು ಅವರು ಯುಎಸ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದರು.
ಪರ್ಯಾಯ ಮಾರ್ಗ? ಸೌದಿ ಅರೇಬಿಯಾ ಮತ್ತು ಯುಎಇ ಹೆಚ್ಚಿನ ತೈಲ ಪೈಪ್‌ಲೈನ್‌ಗಳನ್ನು ನಿರ್ಮಿಸುವ ಮೂಲಕ ಜಲಸಂಧಿಗೆ ಪರ್ಯಾಯ ಮಾರ್ಗವನ್ನು ಮಾಡಲು ಪ್ರಯತ್ನ ಮಾಡಿದ್ದವು. ಆದರೆ ಅವುಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲದೆ, 2019ರಲ್ಲಿ ಹೌತಿ ಮಿಲಿಟಂಟ್‌ಗಳು ಸೌದಿ ಅರೇಬಿಯಾದ ಪೂರ್ವ-ಪಶ್ಚಿಮ ಪೈಪ್‌ಲೈನ್ ಮೇಲೆ ನಡೆಸಿದ ದಾಳಿಯು ಅಂತಹ ಪರ್ಯಾಯ ಮಾರ್ಗಗಳು ಕೂಡ ಅಪಾಯದಿಂದ ಮುಕ್ತವಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ.
ಆದ್ದರಿಂದ ಈಗ ಹೋರ್ಮುಜ್ ಜಲಸಂಧಿಯನ್ನು ವಶಕ್ಕೆ ಪಡೆದುಕೊಂಡು ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಅನಿವಾರ್ಯವಾಗಿದೆ. ಆದರೆ ಅದಕ್ಕೆ ಅಮೆರಿಕಕ್ಕೆ ಬೇರೆ ದೇಶಗಳ ನೆರವು ಅಗತ್ಯವಾಗಿದೆ.

