ಬೆಂಗಳೂರು : ಇಂದು ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ, ಅವರ ಕುಟುಂಬ ಸದಸ್ಯರು ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೌದು. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ 51 ಜನ್ಮದಿನದ ಹಿನ್ನೆಲೆಯಲ್ಲಿ, ಇಂದು ಮುಂಜಾನೆಯೇ ಕುಟುಂಬ ಸದಸ್ಯರು ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್‌ಕುಮಾರ್, ಯುವ ರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ಸೇರಿದಂತೆ ಕುಟುಂಬದ ಪ್ರಮುಖರು ಸ್ಮಾರಕಕ್ಕೆ ಹೂ ನಮನ ಸಲ್ಲಿಸಿ, ತಮ್ಮ ಪ್ರೀತಿಯ ಅಪ್ಪುವನ್ನು ಸ್ಮರಿಸಿದರು
ಸ್ಮಾರಕಕ್ಕೆ ಆಗಮಿಸಿದ ಕುಟುಂಬದವರು, ಅಪ್ಪುವಿನ ನೆನಪಿನಲ್ಲಿ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸ್ಮಾರಕವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಯುವ ರಾಜ್‌ಕುಮಾರ್ ಹಾಗೂ ವಿನಯ್ ರಾಜ್‌ಕುಮಾರ್ ತಮ್ಮ ಚಿಕ್ಕಪ್ಪನ ಸ್ಮರಣೆ ಮಾಡಿದ್ದು, ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಅರ್ಪಿಸಿದರು. ಸ್ಮಾರಕದ ಬಳಿ ಜಮಾಯಿಸಿರುವ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.”ಪೂಜೆಯ ಸಂದರ್ಭದಲ್ಲಿ ಕುಟುಂಬ ಸದಸ್ಯರು ಅಪ್ಪುವನ್ನು ನೆನಪಿಸಿಕೊಂಡು ಭಾವುಕರಾದರು. ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಯುವ ಮತ್ತಿತರರಿದ್ದರು.
“ಅಪ್ಪು ನಮ್ಮ ಜೊತೆ ದೈಹಿಕವಾಗಿ ಇಲ್ಲದಿರಬಹುದು, ಆದರೆ ಅವರ ನೆನಪುಗಳು ನಮ್ಮಲ್ಲಿ ಸದಾ ಜೀವಂತ. ಅವರು ಇಂದಿರಬೇಕಿತ್ತು” ಎಂದು ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವನ್ನು ಅಭಿಮಾನಿಗಳು ರಾಜ್ಯಾದ್ಯಂತ ಹಬ್ಬದಂತೆ ಆಚರಿಸುತ್ತಿದ್ದು, ಸ್ಮಾರಕಕ್ಕೆ ಸಾವಿರಾರು ಜನರು ಭೇಟಿ ನೀಡಿ ತಮ್ಮ ಪ್ರೀತಿಯ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ.

