ಜೀವನದಲ್ಲಿ ಯಶಸ್ಸು ಗಳಿಸುವುದು ಎಷ್ಟು ಮುಖ್ಯವೋ, ಆಪತ್ತುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ. ಕೇವಲ ಧೈರ್ಯವಷ್ಟೇ ಮನುಷ್ಯನನ್ನು ಕಾಪಾಡುವುದಿಲ್ಲ, ಕೆಲವು ಸಂದರ್ಭಗಳಲ್ಲಿ ಸಮಯಪ್ರಜ್ಞೆಯಿಂದ ಅಲ್ಲಿಂದ ಜಾಗ ಖಾಲಿ ಮಾಡುವುದು ಕೂಡ ಶ್ರೇಷ್ಠ ಗುಣವೆನಿಸಿಕೊಳ್ಳುತ್ತದೆ. ಅಂತಹ ಅಪಾಯಕಾರಿ ಸನ್ನಿವೇಶಗಳು ಯಾವುವು? ಯಾವ ಸ್ಥಳದಲ್ಲಿ ಇರುವುದು ನಿಮ್ಮ ಗೌರವ ಮತ್ತು ಜೀವಕ್ಕೆ ಸಂಚಕಾರ ತರಬಹುದು? ಎಂಬ ಕುರಿತು ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ವಿವರಿಸಿರುವ ಅತ್ಯಗತ್ಯ ಅಂಶಗಳ ಮಾಹಿತಿ ಇಲ್ಲಿದೆ.
ಆಚಾರ್ಯ ಚಾಣಕ್ಯರು ಅತ್ಯಂತ ಕುಶಲಮತಿ ಮತ್ತು ಜ್ಞಾನಿ. ಅವರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನದ ಅನೇಕ ಮೌಲ್ಯಯುತ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಅವರು ಅಂದು ಹೇಳಿದ ಮಾತುಗಳು ಇಂದಿಗೂ ಪ್ರಸ್ತುತವಾಗಿದ್ದು, ಅನೇಕರು ಅವುಗಳನ್ನು ತಿಳಿಯಲು ಆಸಕ್ತಿ ತೋರಿಸುತ್ತಾರೆ.
ಚಾಣಕ್ಯರ ಪ್ರಕಾರ, ಈ ಕೆಳಗಿನ ಪರಿಸ್ಥಿತಿಗಳಲ್ಲಿ ಮೌನವಾಗಿ ಅಲ್ಲಿಂದ ಜಾಗ ಖಾಲಿ ಮಾಡುವುದು ಬುದ್ಧಿವಂತಿಕೆ:
೧. ಅಪರಾಧಿಗಳು: ಚಾಣಕ್ಯರ ಪ್ರಕಾರ, ಯಾವುದಾದರೂ ಅಪರಾಧಿ ನಿಮ್ಮ ಬಳಿ ಸಹಾಯಕ್ಕಾಗಿ ಬಂದಾಗ ನೀವು ತಕ್ಷಣ ಅಲ್ಲಿಂದ ಹೊರಟು ಹೋಗಬೇಕು. ತಿಳಿಯದೆಯೂ ನೀವು ಅವರಿಗೆ ಸಹಾಯ ಮಾಡಿದರೆ, ಅದು ನಿಮ್ಮ ಒಳ್ಳೆಯತನಕ್ಕೆ ಕಳಂಕ ತರುವುದಲ್ಲದೆ ನಿಮ್ಮ ಗೌರವಕ್ಕೂ ಧಕ್ಕೆ ತರುತ್ತದೆ. ಆದ್ದರಿಂದ ಅಂತಹವರ ಸಹವಾಸ ಬೇಡ.
೨. ಶತ್ರುಗಳು: ಶತ್ರು ನಿಮ್ಮ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡಿದಾಗ, ತಕ್ಷಣ ಅಲ್ಲಿಂದ ದೂರ ಸರಿಯುವುದು ಒಳ್ಳೆಯದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಏಕೆಂದರೆ ಶತ್ರುವನ್ನು ಸೋಲಿಸಲು ಬಲಕ್ಕಿಂತ ಸರಿಯಾದ ‘ವ್ಯೂಹ’ ಅಥವಾ ತಂತ್ರ ಮುಖ್ಯ. ಸಮಯ ನೋಡಿ ದಾಳಿ ಮಾಡಬೇಕೆ ಹೊರತು, ಆತುರದಲ್ಲಿ ಅಪಾಯಕ್ಕೆ ಸಿಲುಕಬಾರದು.
೩. ಹಿಂಸೆ ಮತ್ತು ಗಲಭೆಗಳು ನಡೆಯುವಾಗ: ಎಲ್ಲಿಯಾದರೂ ಹಿಂಸೆ ಅಥವಾ ಗಲಭೆಗಳು ನಡೆಯುತ್ತಿದ್ದರೆ ಅಂತಹ ಸ್ಥಳದಲ್ಲಿ ಇರಬಾರದು ಎಂದು ಚಾಣಕ್ಯರು ಎಚ್ಚರಿಸಿದ್ದಾರೆ. ಗುಂಪು ಅಥವಾ ಗಲಭೆಯಲ್ಲಿ ಸಿಲುಕಿದಾಗ ನೀವು ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅಲ್ಲಿಂದ ಸುರಕ್ಷಿತವಾಗಿ ಹೊರಬರುವುದೇ ಉತ್ತಮ ಮಾರ್ಗ.
೪. ಆರ್ಥಿಕ ಬಿಕ್ಕಟ್ಟು: ಚಾಣಕ್ಯ ನೀತಿಯ ಪ್ರಕಾರ, ಆರ್ಥಿಕ ಬಿಕ್ಕಟ್ಟು ಎದುರಾದಾಗ ಮುನ್ನೆಚ್ಚರಿಕೆ ಅತ್ಯಗತ್ಯ. ಎಲ್ಲಿ ಆಹಾರ ಮತ್ತು ನೀರಿನ ಅಭಾವ ಉಂಟಾಗುತ್ತದೆಯೋ ಅಥವಾ ಎಲ್ಲಿ ಬದುಕಲು ಕಷ್ಟವಾಗುತ್ತದೆಯೋ, ಅಂತಹ ಸ್ಥಳದಲ್ಲಿ ಹೆಚ್ಚು ಕಾಲ ಇರಬಾರದು. ಸಂಪನ್ಮೂಲಗಳ ಕೊರತೆ ಇರುವ ಸ್ಥಳದಲ್ಲಿ ವಾಸಿಸುವುದು ಅಪಾಯಕಾರಿ ಎಂದು ಆಚಾರ್ಯ ಚಾಣಕ್ಯರು ತಿಳಿಸಿದ್ದಾರೆ.

