ನಿನ್ನೆ ( ಏಪ್ರಿಲ್ 17 ) ಲೋಕಸಭೆಯಲ್ಲಿ ಸ್ಥಾನಗಳ ಏರಿಕೆ ಮಾಡುವ ಮಸೂದೆಗೆ ಸೋಲಾಯಿತು. ಲೋಕಸಭೆಯ ಸ್ಥಾನಗಳನ್ನು 543ರಿಂದ 850ಕ್ಕೆ ಏರಿಸುವ ಸಂವಿಧಾನ ತಿದ್ದುಪಡಿ ಮಸೂದೆ ಇದಾಗಿತ್ತು.
ಈ ಮಸೂದೆ ಅಂಗೀಕಾರವಾಗಲು ಎರಡನೇ ಮೂರರಷ್ಟು ಮತಗಳನ್ನು ಪಡೆದುಕೊಳ್ಳಬೇಕಿತ್ತು. ಆದರೆ ಚಲಾವಣೆಯಾದ 489 ಮತಗಳ ಪೈಕಿ ಪರವಾಗಿ 278 ಮತಗಳು, ವಿರುದ್ಧವಾಗಿ 211 ಚಲಾವಣೆಯಾದವು. 71 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಯಿತು.
ಹೀಗೆ ಮಸೂದೆಗೆ ಸೋಲಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ದಕ್ಷಿಣ ರಾಜ್ಯದ ಜನತೆ ಸಂಭ್ರಮ ಹೊರಹಾಕಿದರು. ಇದಕ್ಕೆ ಕಾರಣ ಈ ಮಸೂದೆ ಅಂಗೀಕಾರವಾದರೆ ದಕ್ಷಿಣ ರಾಜ್ಯಗಳು ಕೇಂದ್ರ ಸರ್ಕಾರ ರಚನೆಯಲ್ಲಿ ಬಲ ಕಳೆದುಕೊಳ್ಳುತ್ತವೆ ಎಂಬುದು ಇವರ ವಾದ.
ಹೀಗಾಗಿ ಈ ಮಸೂದೆಯ ವಿರುದ್ಧ ದಕ್ಷಿಣ ಭಾರತದ ಎಲ್ಲ ಪಕ್ಷಗಳೂ ಸಹ ಸಿಡಿದೆದ್ದಿದ್ದವು. ಆದರೆ ಎನ್‌ಡಿಎಗೆ ಬೆಂಬಲ ಕೊಟ್ಟಿರುವ ಕರ್ನಾಟಕದ ಜೆಡಿಎಸ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಜನಸೇನಾ ಪಾರ್ಟಿ ಈ ಮಸೂದೆ ಪರ ಬ್ಯಾಟ್ ಬೀಸಿದವು.
ಇನ್ನು ಬಿಜೆಪಿ ಸಂಸದರು ಸಾಮಾನ್ಯವಾಗಿ ಈ ಮಸೂದೆ ಪರವೇ ಮತ ಹಾಕಿರುತ್ತಾರೆ. ಅದರಂತೆ ರಾಜ್ಯದ ಡಾ. ಮಂಜುನಾಥ್ ಸಹ ಈ ಮಸೂದೆ ಪರ ಮತ ಹಾಕಿದ್ದಾರೆ. ಇದನ್ನು ಕನ್ನಡಿಗರು ಖಂಡಿಸಿದ್ದು, ಹೃದಯವಂತ ಡಾಕ್ಟರ್ ಎಂದು ವೋಟ್ ಹಾಕಿ ಗೆಲ್ಲಿಸಿದ್ದಕ್ಕೆ ಈಗ ಕರ್ನಾಟಕದ ಬುಡಕ್ಕೆ ತಂದಿಡುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

