ಬೆಂಗಳೂರು: ಸೈಬರ್ ವಂಚಕರು ಹಣ ದೋಚಲು ಏನೆಲ್ಲ ತಂತ್ರಗಳನ್ನು ಉಪಯೋಗಿಸುತ್ತಾರೆ ನೋಡಿ. ವಾಟ್ಸಪ್ಗೆ ಅಪರಿಚಿತ ಸಂಖ್ಯೆಯಿಂದ ಬಂದ ಮದುವೆ ಇನವಿಟೇಷನ್ ಓಪನ್ ಮಾಡುತ್ತಿದ್ದಂತೆ ವ್ಯಕ್ತಿಯೋರ್ವ 9.56 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವಾಟ್ಸಪ್ ಗೆ ಮದುವೆ ಆಹ್ವಾನ ಪತ್ರಿಕೆ ಬಂದಿದೆ ಎಂದು ನಂಬಿ ಫೈಲ್ ಓಪನ್ (APK File Scam) ಮಾಡಿದ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಮೋಸದಾಟಕ್ಕೆ 9.96 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಸೈಬರ್ ವಂಚಕರು ವಾಟ್ಸಪ್ನಲ್ಲಿ ಮದುವೆ ಆಹ್ವಾನದ ಹೆಸರಿನಲ್ಲಿ APK ಫೈಲ್ ಕಳುಹಿಸಿ ಸರ್ಕಾರಿ ಅಧಿಕಾರಿಯೊಬ್ಬರಿಗೆ ಸುಮಾರು 9.96 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರಂದು ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ನಲ್ಲಿ ಮದುವೆ ಆಹ್ವಾನದ ಸಂದೇಶ ಬಂದಿದೆ. ಸ್ನೇಹಿತ ಅಥವಾ ಪರಿಚಿತರದ್ದಿರಬಹುದು ಎಂದು ಭಾವಿಸಿ ಅವರು ಆ ಫೈಲ್ ಅನ್ನು ಮಾಡಿದ್ದಾರೆ.
ಫೈಲ್ ಓಪನ್ ಮಾಡಿದ ಬಳಿಕ ಅದು APK ಫೈಲ್ ಎಂಬುದು ಗೊತ್ತಾಗಿದೆ. ಆಗ ಅದನ್ನು ಹೆಚ್ಚಿನ ಗಮನ ಕೊಡದೆ ಬಿಟ್ಟಿದ್ದಾರೆ. ಆದರೆ 15 ನಿಮಿಷಗಳಲ್ಲಿ ಅವರ ಮೊಬೈಲ್ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಸಂದೇಶಗಳು ಬರಲು ಆರಂಭಿಸಿವೆ. ತಕ್ಷಣ ಬ್ಯಾಂಕ್ ಖಾತೆ ಪರಿಶೀಲಿಸಿದಾಗ, ಸುಮಾರು 9 ಲಕ್ಷ 96 ಸಾವಿರ ಹಣ ವಿವಿಧ ಹಂತಗಳಲ್ಲಿ ವಂಚಕರ ಖಾತೆಗೆ ವರ್ಗಾವಣೆಯಾಗಿರುವುದು ಗೊತ್ತಾಗಿದೆ. ಇದರಿಂದ ಗಾಬರಿಯಾದ ರಮೇಶ್ ಬಾಬು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಬರುವ APK ಫೈಲ್ಗಳು, ಲಿಂಕ್ಗಳನ್ನು ಓಪನ್ ಮಾಡುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ.
ಎಪಿಕೆ (APK – Android Package File) ಎಂದರೆ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಲು ಬಳಸುವ ಒಂದು ಫೈಲ್ ಫಾರ್ಮ್ಯಾಟ್ ಆಗಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಗದ ಆ್ಯಪ್ಗಳನ್ನು ಇಂಟರ್ನೆಟ್ನಿಂದ ನೇರವಾಗಿ ಡೌನ್ಲೋಡ್ ಮಾಡಿ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಲು ಈ ಫೈಲ್ಗಳನ್ನು ಬಳಸಲಾಗುತ್ತದೆ.
ಇವು ಕಂಪ್ಯೂಟರ್ನಲ್ಲಿರುವ exe ಫೈಲ್ಗಳಿದ್ದಂತೆ. ಎಪಿಕೆ ಫೈಲ್ಗಳು ಆಂಡ್ರಾಯ್ಡ್ಗೆ ಅತ್ಯಂತ ಉಪಯುಕ್ತವಾಗಿದ್ದರೂ, ಸೈಬರ್ ವಂಚಕರು ಇವುಗಳ ಮೂಲಕ ಮೊಬೈಲ್ ಹ್ಯಾಕ್ ಮಾಡಿ ಹಣ ದೋಚುವ ಸಾಧ್ಯತೆ ಇರುತ್ತದೆ. ಹಾಗಾಗಿ ವಾಟ್ಸಾಪ್, ಟೆಲಿಗ್ರಾಮ್ ಅಥವಾ ಅಪರಿಚಿತ ಲಿಂಕ್ಗಳ ಮೂಲಕ ಬರುವ ಎಪಿಕೆ ಫೈಲ್ಗಳನ್ನು ಕ್ಲಿಕ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳದಿರುವುದು ಉತ್ತಮ.

